ಮಾರುತಿ ಸುಜುಕಿಗೆ ಭರವಸೆಯ ಹಬ್ಬದ ಸೀಸನ್

ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿಗೂ ಮಾರಾಟದಲ್ಲಿ ಹಿನ್ನಡೆಯಾಗಿದೆ. ಜೂನ್ ತಿಂಗಳಲ್ಲಿ ಮಾರುತಿ ಸುಜುಕಿ ಮಾರಾಟ ಶೇ. 8.8ರಷ್ಟು ಇಳಿಕೆ ಕಂಡಿತ್ತು. ಕಳೆದ ವರ್ಷದ ಇದೇ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಸುಮಾರು 800 ಕಾರುಗಳಷ್ಟು ಕಡಿಮೆ ಮಾರಾಟವಾಗಿದೆ.
ಇಂಧನ ದರ ಏರಿಕೆ, ಸಾಲದ ಮೇಲಿನ ಬಡ್ಡಿದರ ಏರಿಕೆ ಇವೆಲ್ಲ ವಾಹನ ಮಾರಾಟ ಇಳಿಕೆ ಕಾಣಲು ಪ್ರಮುಖ ಕಾರಣಗಳಾಗಿವೆ. ನೌಕರರ ಮುಷ್ಕರ, ಪ್ರತಿಭಟನೆಯೂ ಮಾರುತಿ ಮಾರಾಟಕ್ಕೆ, ಉತ್ಪಾದನೆಗೆ ಹಿನ್ನಡೆಯಾಗಿದೆ.
ಮುಂದಿನ ದಿನಗಳಲ್ಲಿ ವಾಹನ ಮಾರಾಟ ಹೆಚ್ಚಾಗುವ ನಿರೀಕ್ಷೆಯನ್ನು ಮಾರುತಿ ಸುಜುಕಿ ಚೇರ್ಮನ್ ಆರ್ ಸಿ ಭಾರ್ಗವ ವ್ಯಕ್ತಪಡಿಸುತ್ತಾರೆ. ಕಂಪನಿಯು ಶೀಘ್ರದಲ್ಲಿ ಹೊಸ ಸ್ವಿಫ್ಟ್ ಕಾರೊಂದನ್ನು ಹೊರತರಲಿದೆ.
ಟೊಯೊಟಾ ಇನ್ನೋವಾಕ್ಕೆ ಪ್ರತಿಯಾಗಿ ಮಾರುತಿ ಸ್ಪೋರ್ಟ್ಸ್ ವೆಹಿಕಲ್ ಕೂಡ ರಸ್ತೆಗಿಳಿಯಲಿದೆ. ದೀಪಾವಳಿ ವೇಳೆಗೆ ಮಾರಾಟವೂ ಗರಿಗೆದರುವ ನಿರೀಕ್ಷೆಯನ್ನು ಮಾರುತಿ ವ್ಯಕ್ತಪಡಿಸಿದೆ.
ಇತ್ತೀಚೆಗೆ ಮಾನೆಸರ್ ಘಟಕದಲ್ಲಿ ಮಾರುತಿ ಸುಜುಕಿ ಮತ್ತು ಕಾರ್ಮಿಕರ ನಡುವಿನ ಸಂಘರ್ಷವೂ ಉತ್ಪಾದನೆ ಕುಸಿತಕ್ಕೆ ಕಾರಣವಾಗಿದೆ. ಇದರಿಂದಾಗಿ ಮಾರುತಿ ಕಾರುಗಳಿಗೆ ವೈಟಿಂಗ್ ಅವಧಿಯೂ ಹೆಚ್ಚಳವಾಗಿದೆ. ಮುಂದಿನ ಹಬ್ಬದ ಸೀಸನ್ ಮಾರುತಿ ಸುಜುಕಿ ಶುಭ ತರಲಿ...


Click it and Unblock the Notifications








