ಮಾರುತಿ ಹೋಂಡಾ ಟೊಯೊಟಾ ದರ ಸಮರ

ದರ ಸಮರದಲ್ಲಿ ಹೋಂಡಾ ಮುಂದಿದೆ. ನಂಬಿದರೆ ನಂಬಿ, ಹೋಂಡಾ ಜಾಝ್ ದರ 1.7 ಲಕ್ಷ ರು.ನಷ್ಟು ಕಡಿಮೆಯಾಗಿದೆ. ಇದರಿಂದಾಗಿ ಜಾಝ್ ಕಾರುಗಳು ಆರು ಲಕ್ಷ ರು. ಆಸುಪಾಸಿನಲ್ಲಿ ದೊರಕುವ ನಿರೀಕ್ಷೆಯಿದೆ. ತನ್ನ ಜನಪ್ರಿಯ ಹೋಂಡಾ ಸಿಟಿ ಕಾರಿನ ದರವನ್ನು ಸುಮಾರು 66 ಸಾವಿರ ರು. ತಗ್ಗಿಸಿದೆ.
ಆಗಸ್ಟ್ ಹದಿನೇಳರಂದು ರಸ್ತೆಗಿಳಿಯಲಿರುವ ನೂತನ ಸ್ವಿಫ್ಟ್ ಮೂಲಕ ಮಾರುತಿ ಸುಜುಕಿ ದರ ಸಮರದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸದ್ಯ ರಸ್ತೆಯಲ್ಲಿರುವ ಸ್ವಿಫ್ಟ್ ಗಿಂತ ಹಲವು ಫಿಚರ್ ಗಳನ್ನು ನೂತನ ಕಾರು ಹೊಂದಿರುವ ನಿರೀಕ್ಷೆಯನ್ನು ಹಲವು ವರದಿಗಳು ವ್ಯಕ್ತಪಡಿಸಿವೆ. ಆದಗ್ಯೂ ಒಂದು ಮೂಲದ ಪ್ರಕಾರ ನೂತನ ಸ್ವಿಫ್ಟ್ ದರ ಹಳೆಯ ಸ್ವಿಫ್ಟ್ ಗಿಂತ ಹೆಚ್ಚು ದುಬಾರಿಯಾಗಿಲ್ಲ ಎನ್ನಲಾಗಿದೆ.
ದರ ಸಮರದಲ್ಲಿ ಟೊಯೊಟಾ ಕೂಡ ಸೈಲೆಂಟಾಗಿ ಪಾಲ್ಗೊಂಡಿದೆ. ಕಂಪನಿಯು ಕಳೆದ ವರ್ಷ ಹೊರತಂದ ಎಟಿಯೋಸ್ ಸೆಡಾನ್ ಕಾರು ದರ ಸುಮಾರು 4.8 ಲಕ್ಷ ರು. ಇತ್ತು. ಆದರೆ ಇತ್ತೀಚೆಗೆ ರಸ್ತೆಗಿಳಿದ ಎಟಿಯೋಸ್ ಲಿವಾ ದರ ಸುಮಾರು 3.99 ಲಕ್ಷ ರು.ನಿಂದ ಆರಂಭವಾಗುತ್ತದೆ. ಬಡ್ಡಿದರ ಮತ್ತು ಇಂಧನ ದರಗಳ ಏರಿಕೆ ಕಾರುಗಳ ದರ ತಗ್ಗಲು ಪ್ರಮುಖ ಕಾರಣವಾಗಿದೆ. ಇನ್ನಷ್ಟು ಕಂಪನಿಗಳು ದರ ಸಮರದಲ್ಲಿ ಪಾಲ್ಗೊಂಡ ಕುರಿತು ವರದಿಗಳಿವೆ.


Click it and Unblock the Notifications








