ಹೋಂಡಾ ಬ್ರಿಯೊ: ಸುರಕ್ಷತೆ ಒಂದು ಆಯ್ಕೆ ಅಷ್ಟೇ!

ಅಯ್ಯೋ ಶಿವನೇ! ಕಂಪನಿ ಗ್ರಾಹಕರ ಪ್ರಾಣದೊಂದಿಗೆ ಆಟ ಆಡುತ್ತಿದೆಯೇ ಎಂದು ಕೇಳದಿರಿ. ಆದರೆ ನಿಮಗೆ ಸುರಕ್ಷತಾ ಫೀಚರುಗಳು ಬೇಕಾದರೆ ಕೆಲವು ಸಾವಿರ ರುಪಾಯಿ ಜಾಸ್ತಿ ಕೊಡಬೇಕು. ಕಡಿಮೆ ದರದ ಬ್ರಿಯೊ ಬೇಕಾದರೆ ಸೇಫ್ಟಿಗೆ ಎಳ್ಳುನೀರು ಬಿಟ್ಟು ಖರೀದಿಸಬಹುದಂತೆ.
ಕಂಪನಿ ಬ್ರಿಯೊ ಕಾರನ್ನು ಕಡಿಮೆ ದರಕ್ಕೆ ನೀಡಲು ತಿಪ್ಪರಲಾಗ ಹಾಕುತ್ತಿದೆ. ದರ ಕಡಿಮೆ ಇದ್ದರೆ ಹೆಚ್ಚು ಗ್ರಾಹಕರನ್ನು ಆಕರ್ಶಿಸಬಹುದು ಅಥವಾ ಇತರ ಕಂಪನಿಗಳಿಗೆ ಸಮರ್ಥ ಪೈಪೋಟಿ ನೀಡಬಹುದು ಅಂತ ಕಂಪನಿ ಭಾವಿಸಿದೆ.
ಕಂಪನಿಯ ನೂತನ ಬ್ರಿಯೊ ರಸ್ತೆಗಿಳಿಯುವ ಮುನ್ನವೇ ಗ್ರಾಹಕರಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ. ಆದರೆ ಆರಂಭದ ಆವೃತ್ತಿಯನ್ನು ಏರ್ ಬ್ಯಾಗ್ ಇಲ್ಲದೇ ಹೊರತರುವ ನಿರೀಕ್ಷೆಯಿದೆ. ಇಂತಹ ಸುರಕ್ಷತೆಯ ಫೀಚರುಗಳನ್ನು ಅಳವಡಿಸಿದರೆ ಕಾರಿನ ದರ 45-60 ಸಾವಿರ ರು. ಹೆಚ್ಚಾಗುತ್ತದೆ.
ಆದರೆ ಕಂಪನಿಯ ಜಾಗತಿಕ ನಿಲುವು "ಸೇಫ್ಟಿ ಫಸ್ಟ್" ಎಂದಾಗಿದೆ. ಆದರೆ ಅಗ್ಗದ ಕಾರು ನೀಡುವ ಸಲುವಾಗಿ ಸೇಫ್ಟಿ ನೆಕ್ಸ್ಟ್ ಸೇಲ್ಸ್ ಫಸ್ಟ್ ಅಂತ ಬದಲಾಯಿಸಲು ಯೋಜಿಸಿದೆ ಎಂದು ನಮ್ಮ ಆಟೋ ಮಿತ್ರರು ಹೇಳುತ್ತಾರೆ. ಕಂಪನಿಯ ಭಾರತದ ಬ್ರಿಯೊ ನಿಯಮ ಒಂದಿಷ್ಟು ಅಚ್ಚರಿ ಹುಟ್ಟಿಸುತ್ತದೆ.
ಕಂಪನಿ ಜಾಗತಿಕವಾಗಿ ಬೇಸ್ ಕಾರುಗಳನ್ನು ಬಿಡದಂತೆ ಸುರಕ್ಷತೆಯ ಫೀಚರುಗಳಾದ ಏರ್ ಬ್ಯಾಗ್ ಇತ್ಯಾದಿಗಳನ್ನು ಅಳವಡಿಸುತ್ತದೆ. ಕಂಪನಿಯ ಕಾರುಗಳು ಏರ್ ಬ್ಯಾಗ್, ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಬಾಡಿ ಕೇಜ್ ಇತ್ಯಾದಿ ಸುರಕ್ಷಿತ ಫೀಚರುಗಳನ್ನು ಅಳವಡಿಸಿಕೊಂಡೇ ಬರುತ್ತಿತ್ತು.
ಸುರಕ್ಷಿತ ಫೀಚರುಗಳನ್ನು ಕಂಪನಿ ಕಡೆಗಣಿಸುವುದು ಕಂಪನಿಗೆ ಅಹಿತವಾಗಬಹುದು. ಟೊಯೊಟಾ ಲಿವಾ, ಷೆವರ್ಲೆ ಬೀಟ್, ಸ್ಕೋಡಾ ಫಾಬಿಯಾ ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ಗಳೊಂದಿಗೆ ಪೈಪೋಟಿ ನಡೆಸಲು ಸಾಧ್ಯವಾಗದು ಎಂದು ವಾಹನ ಪಂಡಿತರುಗಳು ಅಭಿಪ್ರಾಯಪಟ್ಟಿದ್ದಾರೆ.
ಕಂಪನಿಯ ಭಾರತ ವಿಭಾಗದ ಇನ್ನೊಬ್ಬ ಅಧಿಕಾರಿಯೂ ಬ್ರಿಯೊದಲ್ಲಿ ಸ್ಟಾಂಡರ್ಡ್ ಫೀಚರ್ಸ್ ಕಾಣೆಯಾಗಲಿದೆ ಎಂದಿದ್ದಾರೆ. ಒಂದು ಮೂಲದ ಪ್ರಕಾರ ನೂತನ ಬ್ರಿಯೊ ಕಾರಿನ ದರ 5 ಲಕ್ಷ ರುಪಾಯಿಗಿಂತ ಕಡಿಮೆ ಇರಲಿದೆಯಂತೆ! ಆದರೆ ಸೇಫ್ಟಿ ಇಲ್ಲದಿದ್ದರೆ ಯಾರಿಗೆ ಬೇಕು ಅಲ್ಲವೇ!


Click it and Unblock the Notifications








