ಸ್ವಚ್ಛ ಗಾಳಿಗೆ ಶ್ರೀಲಂಕಾ ಕಾರು ನೀತಿ, ನಮಗೆ ಪಾಠ!

ಸೈಲೆಂಟ್ ಆಗಿ ಆಮದು ಮಾಡಿಕೊಳ್ಳುವ ಕಾರುಗಳಿಗೆ ಶ್ರೀಲಂಕಾ ಅತ್ಯಧಿಕ ತೆರಿಗೆ ವಿಧಿಸಿದೆ. ಅಲ್ಲಿ ಹೈಬ್ರಿಡ್ ಕಾರುಗಳಿಗೆ ಕೇವಲ ಶೇ. 50ರಷ್ಟು ಆಮದು ಸುಂಕ. ಆದರೆ ಪೆಟ್ರೋಲ್ ಡೀಸೆಲ್ ಕಾರುಗಳಿಗೆ ಶೇಕಡ 450ಕ್ಕಿಂತ ಹೆಚ್ಚು ತೆರಿಗೆ ವಿಧಿಸಲಾಗುತ್ತದೆ.
ಈ ನೀತಿಯಿಂದ ಶ್ರೀಲಂಕಾಕ್ಕೆ ಸುಮಾರು 5.36 ಕೋಟಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಉಳಿಸಿದೆ. ಯಾಕೆಂದರೆ ಅಲ್ಲಿ ಕಡಿಮೆ ಸುಂಕ ವಿಧಿಸಿದ ಕಾರಣ ಹೈಬ್ರಿಡ್ ವಾಹನ ಮಾರಾಟ ಹೆಚ್ಚಾಗಿದೆ.
ಭಾರತದಲ್ಲಿ ಹೈಬ್ರಿಡ್ ಕಾರು ದುಬಾರಿ. ಪುಟ್ಟ ರೇವಾ ದರ 3 ಲಕ್ಷ ರು. ಮೇಲಿದೆ. ಇಲ್ಲಿ ಇತರ ಕಾರಿಗಿಂತ ಹೈಬ್ರಿಡ್ ಕಾರುಗಳು ಶೇ. 70ರಿಂದ ಶೇ. 100ರಷ್ಟು ದುಬಾರಿ. ಇದೇ ಕಾರಣಕ್ಕೆ ಮಾರಾಟದಲ್ಲಿ ಹಿನ್ನಡೆ ಅನುಭವಿಸಿ ಹೋಂಡಾ ಭಾರತದಲ್ಲಿ ಹೈಬ್ರಿಡ್ ಕಾರು ಮಾರಾಟ ಮಾಡೋದನ್ನೇ ನಿಲ್ಲಿಸಿದೆ.
ಹಾಗಂತ ಈ ನೀತಿ ಅನುಸರಿಸುವುದು ಶ್ರೀಲಂಕಾದಷ್ಟು ಭಾರತಕ್ಕೆ ಸುಲಭವಲ್ಲ. ಶ್ರೀಲಂಕಾ ವಾಹನ ಮಾರುಕಟ್ಟೆಗೂ ಭಾರತಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅಸಲಿಗೆ ಅಲ್ಲಿ ವಾಹನಗಳ ಉತ್ಪಾದನೆ ಕಡಿಮೆ. ಹೆಚ್ಚಿನ ವಾಹನಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ಆದರೆ ಭಾರತದ ವಾಹನ ಮಾರುಕಟ್ಟೆ ಜಾಗತಿಕವಾಗಿ ಪ್ರಮುಖ ಮಾರುಕಟ್ಟೆಯಾಗಿದೆ. ಶ್ರೀಲಂಕಾ ಹೆಚ್ಚಿನ ವಾಹನಗಳನ್ನು ಭಾರತದಿಂದ ಆಮದು ಮಾಡಿಕೊಳ್ಳುತ್ತದೆ. ಉದಾಹರಣೆಗೆ ಇತ್ತೀಚೆಗೆ ಭಾರತದ ನ್ಯಾನೊ ಕಾರುಗಳು ಅಲ್ಲಿಗೆ ರಫ್ತಾಗಿರೋದನ್ನು ನೆನಪಿಸಿಕೊಳ್ಳಬಹುದು.
ಹೀಗಾಗಿ ಶ್ರೀಲಂಕಾದಲ್ಲಿ ವಾಹನಗಳು ದುಬಾರಿ. ನಮ್ಮ ಒಂದುವರೆ ಲಕ್ಷದ ನ್ಯಾನೊ ಕಾರಿಗೆ ಅಲ್ಲಿ ಸುಮಾರು 4-5 ಲಕ್ಷ ರು. ಇದೆ. ನಮ್ಮಲ್ಲಿ ಪರಿಸರ ಸ್ನೇಹಿ ವಾಹನ ಆಮದಿಗೆ ಅಂತಹ ವಿನಾಯಿತಿ ಏನಿಲ್ಲ. ವಿನಾಯಿತಿಗಳೆಲ್ಲ ಬಜೆಟ್ ಪ್ರಸ್ತಾಪಗಳಲ್ಲಿಯೇ ಬೆಚ್ಚಗಿದೆ.
ಹಾಗಂತ ನಮ್ಮ ಸರಕಾರ ಸುಮ್ಮನೆ ಕೂತಿದೆ ಅಂದರೆ ಸಿನಿಕತನವಾದೀತು. 2015ಕ್ಕೆ ದೇಶದ ಕಾರುಗಳ ಇಂಧನ ದಕ್ಷತೆಯನ್ನು ಹೆಚ್ಚಿಸಲು ಯೋಜಿಸಿದೆ. ಕಾರುಹೊರಸೂಸುವ ಇಂಗಾಲದ ವಿಚಾರ ಸದ್ಯ ಕಡತದಲ್ಲಿಯೇ ಉಳಿದಿದೆ.
ಈಗ ದೇಶದಲ್ಲಿ ಡೀಸೆಲ್ ಕಾರುಗಳು ಬೆಂಗಳೂರು ಬೇಕರಿಗಳಲ್ಲಿ ಟೀ ಮಾರಾಟವಾಗುವ ಹಾಗೇ ಮಾರಾಟವಾಗುತ್ತಿದೆ. ಯಾಕೆಂದರೆ ಈಗ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳ ನಡುವೆ ಅಂತಹ ವ್ಯತ್ಯಾಸವಿಲ್ಲ. ಆದರೆ ದೆಹಲಿ ಸರಕಾರ ಬಜೆಟ್ ನಲ್ಲಿ ಡೀಸೆಲ್ ಕಾರುಗಳಿಗೆ ಹೆಚ್ಚು ತೆರಿಗೆ ವಿಧಿಸುವ ಪ್ರಸ್ತಾಪ ಮಾಡಿದೆ.
ಪರಿಸರ ಉಳಿಯಬೇಕಾದರೆ ಕಠಿಣ ನಿಲುವು ತಾಳುವುದು ಅನಿವಾರ್ಯ. ಇಲ್ಲವಾದರೆ ಇಂಧನ ಕುಡಿಯುವ ಬಕಾಸುರ ಕಾರುಗಳು ದೇಶದ ರಸ್ತೆಯಲ್ಲಿ ತುಂಬಿತುಳುಕಲಿವೆ. ಸೇವಿಸುವ ಶುದ್ಧಗಾಳಿಗೆ ಪರದಾಡಬೇಕಾದೀತು.
ಪೆಟ್ರೋಲ್ ಡೀಸೆಲ್ ಕಾರುಗಳಿಗೆ ಲಂಡನಿನಲ್ಲಿ ಅತ್ಯಧಿಕ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತಿದೆ. ಹೀಗಾಗಿ ಅಲ್ಲಿ ಇಂತಹ ಕಾರುಗಳನ್ನು ಖರೀದಿಸುವ ಮುನ್ನ ನೂರಾರು ಬಾರಿ ಯೋಚಿಸಬೇಕಾಗುತ್ತದೆ. ಕೆಲವು ದೇಶಗಳಲ್ಲಿ ಹೈಬ್ರಿಡ್ ಕಾರುಗಳಿಗೆ ಸಾಕಷ್ಟು ಸಡಿಲ ನೀತಿಯಿದೆ. ಇದರಿಂದ ಹೆಚ್ಚು ಜನರು ಹೈಬ್ರಿಡ್ ಕಾರುಗಳತ್ತ ಮುಖ ಮಾಡುತ್ತಾರೆ.
ಸದ್ಯ ನಮ್ಮ ರಸ್ತೆಯಲ್ಲಿ ಬೆರಳೆಣಿಕೆಯ ರೇವಾ ಕಾರುಗಳು ಓಡುತ್ತಿವೆ. ಇದು ಸಾಲದು. ಹಲವು ಕಂಪನಿಗಳ ಹಲವು ಹೈಬ್ರಿಡ್ ಕಾರುಗಳನ್ನು ನಾವು ಸ್ವಾಗತಿಸಬೇಕು. ಪೆಟ್ರೋಲ್ ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಬೇಕು. ಸದ್ಯ ಶ್ರೀಲಂಕಾವನ್ನು ನೋಡಿ ಕೊಂಚ ನಾವು ಕಲಿಯಬಹುದು.


Click it and Unblock the Notifications








