ಸಂಜಯ್ ದತ್ ಫೆರಾರಿಯಲ್ಲಿ ಶರ್ಮನ್ ಜೋಷಿ ಸವಾರಿ

ವಿಧು ವಿನೋದ್ ಛೋಪ್ರ ನಿರ್ದೇಶನದ "ಫೆರಾರಿ ಕಿ ಸವಾರಿ" ಚಿತ್ರದಲ್ಲಿ ಶರ್ಮನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಂಜಯ್ ದತ್ ತನ್ನ ಸ್ನೇಹಿತ ಶರ್ಮನ್ ಗೆ ಬರೀ ಕಾರು ಮಾತ್ರ ನೀಡುತ್ತಿಲ್ಲ. ಫೆರಾರಿ ಕಾರು ಚಾಲನೆಗೆ ಮಾರ್ಗದರ್ಶನ, ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ.
ಹೀಗಾಗಿ ಸಿನಿಮಾ ನಿರ್ಮಪಕರ ತಲೆಭಾರ ಕೊಂಚ ಕಡಿಮೆಯಾಗಿದೆ. ಇಲ್ಲದಿದ್ದರೆ ಫೆರಾರಿ ಚಾಲನೆ ಕಲಿಸಲು ಇವರಿಗೆ ಬೇರೆ ವೃತ್ತಿಪರರನ್ನು ನೇಮಿಸಿಕೊಳ್ಳಬೇಕಿತ್ತು. ಅದನ್ನೆಲ್ಲ ನಾನು ಹೇಳಿಕೊಡ್ತಿನಪ್ಪ ಅಂತ ಮುನ್ನಾಬಾಯ್ ಅಭಯ ನೀಡಿದ ಮೇಲೆ ನಿರ್ಮಾಪಕರು ನಿರುಮ್ಮಳರಾಗಿದ್ದಾರೆ.
ದೇಶದಲ್ಲಿ ಫೆರಾರಿ ಕಾರು ಹೊಂದಿರುವರು ಬೆರಳೆಣಿಕೆಯಲ್ಲಿದ್ದಾರೆ ಅಷ್ಟೇ. ಮಾಸ್ಟರ್ ಬಾಸ್ಟರ್ ಸಚಿನ್ ತೆಂಡೂಲ್ಕರ್, ಸಂಜಯ್ ದತ್ ಇವರಲ್ಲಿ ಪ್ರಮುಖರು. ಫೆರಾರಿ 599 ಜಿಟಿಬಿ ಕಾರಿನ ದರ ಭಾರತದ ಮಾರುಕಟ್ಟೆಯಲ್ಲಿ ಸುಮಾರು 5.5 ಕೋಟಿ ರುಪಾಯಿ ಇದೆ.
ಈ ಕಾರು ನಾಲ್ಕು ಸೆಕೆಂಡಿನಲ್ಲಿ ಪ್ರತಿಗಂಟೆಗೆ 100 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. ಈ ಕಾರಿನ ಗರಿಷ್ಠ ವೇಗ ಪ್ರತಿಗಂಟೆಗೆ 330 ಕಿ.ಮೀ. ಸಂಜಯ್ ದತ್ ತನ್ನ ಸೂಪರ್ ಲಕ್ಷುರಿ ಕಾರನ್ನು ನೀಡುತ್ತಿರುವುದರಿಂದ ಶರ್ಮನ್ ಮತ್ತು ನಿರ್ಮಪಕರು ಸಖತ್ ಖುಷಿಗೊಂಡಿದ್ದಾರೆ. ತನ್ನ ಸ್ನೇಹಿತ ಶರ್ಮನ್ ನ ಮೊದಲ ಪ್ರಮುಖ ಸಿನಿಮಾಕ್ಕೆ ಮುನ್ನಾಬಾಯ್ ಫೆರಾರಿ ಕಾಣಿಕೆ ನೀಡಿದ್ದಾರೆ.


Click it and Unblock the Notifications








