ನಾವು ಸ್ವಿಫ್ಟ್ ಕೇಳಿದಾಗ ಅವಳು ಕಿಸಕ್ಕೆಂದು ನಕ್ಕಿದ್ಯಾಕೆ?!

ಒಮ್ಮೆ ಸುತ್ತಲು ಕಣ್ಣಾಡಿಸಿದೇವು. ವ್ಯಾಗನಾರ್, ಆಲ್ಟೊ, ಸ್ವಿಫ್ಟ್ ಕಾರುಗಳ ಬ್ಯಾನರುಗಳು ಗಮನ ಸೆಳೆಯುತ್ತಿದ್ದವು. ಶೋರೂಂನಲ್ಲಿ ಸುಂದರ ಹುಡುಗಿಯರಿದ್ದಾರೆಯೇ ಅಂತ ನನ್ನ ಕಣ್ಣು ಹುಡುಕುತ್ತಿತ್ತು.
ನಮ್ಮ ಪಕ್ಕದ ಚೈರ್ ನಲ್ಲಿ ಚಂದದ ಹುಡುಗಿಯೊಬ್ಬಳು ನಮ್ಮನೇ ಗಮನಿಸುತ್ತಿದ್ದಳು. ಅವಳ ಅಪ್ಪ ಅಮ್ಮನೂ ಜೊತೆಗಿದ್ದರಿಂದ ನೋಡಲು ನನಗೆ ಧೈರ್ಯ ಬರಲಿಲ್ಲ.
ಆಗ ನಮ್ಮ ಬಳಿಗೆ ಶೋರೂಂ ಮಾರಾಟ ಪ್ರತಿನಿಧಿ ಬಂದ. ನಮ್ಮಲ್ಲೊಬ್ಬ "ಸ್ವಿಫ್ಟ್ ಕಾರು" ಅಂದ. ಸ್ವಿಫ್ಟ್ ಎಂಬ ಪದ ಕೇಳಿದಾಗ ಪಕ್ಕದಲ್ಲಿ ಕುಳಿತಿದ್ದ ಹುಡುಗಿ ಕಿಸಕ್ಕನೆ ನಕ್ಕು ಅವಳ ಅಪ್ಪ ಅಮ್ಮನಲ್ಲಿ ಏನೋ ಹೇಳತೊಡಗಿದಳು. ನಾನು ಅವಳನ್ನೇ ವಾರೆ ಕಣ್ಣಿಂದ ನೋಡುತ್ತಿದ್ದೆ. ನಕ್ಕಾಗ ಅವಳು ಇನ್ನೂ ಚೆನ್ನಾಗಿ ಕಾಣುತ್ತಾಳೆ ಅನಿಸಿತು.
ಮಾರಾಟ ಪ್ರತಿನಿಧಿ ಹೊಸ ಸ್ವಿಫ್ಟ್ ಕುರಿತು ಹೇಳಲಾರಂಬಿಸಿದ. ಯಾವೆಲ್ಲ ಫೀಚರುಗಳಿವೆ? ಹಳೆಯ ಸ್ವಿಫ್ಟ್ ಗೆ ಹೋಲಿಸಿದರೆ ಯಾವೆಲ್ಲ ಬದಲಾವಣೆಗಳಾಗಿವೆ. ಇತ್ಯಾದಿ ಹೇಳಲಾರಂಭಿಸಿದ.
ನಮಗೆ ಅದೆಲ್ಲ ತಿಳಿದಿರೋ ವಿಷ್ಯ. ಆದರೂ ಅದನ್ನೆಲ್ಲ ಕೇಳಿ ಕೊನೆಗೆ ವೇಟಿಂಗ್ ಪಿರೆಯಿಡ್ ಕುರಿತು ಕೇಳಿದಾಗ ಮಾತ್ರ ಆತ ಧ್ವನಿ ತಗ್ಗಿಸಿದ. ಸಾರ್ ನಿಮಗೆ ಯಾವಾಗ ಸ್ವಿಫ್ಟ್ ಕಾರು ಕೈ ಸೇರಬೇಕು ಅಂದ. ಅದಕ್ಕೆ ದೀಪಾವಳಿಗೆ ಸಿಗಬಹುದಾ ಅಂತ ಅಮಾಯಕ ಪ್ರಶ್ನೆ ಕೇಳಿದೇವು.
ಆತ ಮೀಸೆಯಡಿ ನಗುತ್ತ "ಖಂಡಿತಾ ಸಾರ್" ಅಂದ. "ಹೌದಾ ಅಷ್ಟು ಬೇಗ ಸಿಗುತ್ತಾ" ಅಂತ ನಾವು ಅಚ್ಚರಿಯಿಂದ ಕೇಳಿದೆವು. ಯಾಕೆಂದರೆ ನಾವು ಸ್ವಿಫ್ಟ್ ವೇಟಿಂಗ್ ಪಿರೆಯೆಡ್ ಹೆಚ್ಚಳದ ಕುರಿತು ಹತ್ತು ಹಲವು ಲೇಖನ ಬರೆದಿದ್ದೇವು.
ಹಳೆಯ ಸ್ವಿಫ್ಟ್ ಬೇಕಾದರೆ ಈ ದೀಪಾವಳಿಗೆ ನಿಮಗೆ ನೀಡಲು ಪ್ರಯತ್ನಿಸಬಹುದು ಅಂದ. "ಸಾರ್.. ನಮಗೆ ಹೊಸ ಸ್ವಿಫ್ಟ್ ಬೇಕು" ಅಂತ ಕೋರಸ್ ಧ್ವನಿಯಲ್ಲಿ ಹೇಳಿದೇವು.
ಹೊಸ ಸ್ವಿಫ್ಟ್ ಮುಂದಿನ ವರ್ಷದ ದೀಪಾವಳಿಗೆ ಡೆಲಿವರಿ ಆಗಬಹುದು ಅಂತ ಪಕ್ಕದಲ್ಲಿ ಕುಳಿತಿದ್ದ ಅಂಕಲ್ ಹೇಳಿದರು. ಅವರ ಮಾತಿಗೆ ನಾನು ನೋಡುತ್ತಿದ್ದ ಆ ಹುಡುಗಿಯೂ ಕಿಸ್ಸಕ್ಕೆಂದು ಮತ್ತೆ ನಕ್ಕಳು.
ಇವಳನ್ನು ಬಿಡಬಾರದು ಅಂತ ಮನಸ್ಸಲ್ಲೇ ನಿರ್ಧರಿಸಿದೆವು. ಆದರೆ ಏನು ಮಾಡೋದು ಅವಳ ಅಪ್ಪ ಅಮ್ಮನೂ ಜೊತೆಗಿದ್ದಾರಲ್ಲ. ಹೀಗಾಗಿ ಏನು ಮಾಡಲಾಗಲಿಲ್ಲ.
ಆಮೇಲೆ ಅವರಲ್ಲಿ ಮಾತನಾಡಿದಾಗ ತಿಳಿಯಿತು. ಅವರು ಹೊಸ ಸ್ವಿಫ್ಟ್ ರಸ್ತೆಗಿಳಿಯೋ ಮುನ್ನವೇ ಬುಕ್ಕಿಂಗ್ ಮಾಡಿದ್ದಾರಂತೆ. ಯಾವಾಗ ಡೆಲಿವರಿ ಆಗುತ್ತೆ ಅಂತ ಇನ್ನೂ ಗೊತ್ತಾಗಿಲ್ಲವಂತೆ.
ಮಾರುತಿ ಮಾನೆಸರ್ ಘಟಕದಲ್ಲಿ ನೌಕರರ ಪ್ರತಿಭಟನೆಯಿಂದ ಮಾರುತಿ ಸ್ವಿಫ್ಟ್ ಉತ್ಪಾದನೆಗೆ ಹಿನ್ನಡೆಯಾಗಿದೆ. ಹೀಗಾಗಿ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಕಾರು ಪೂರೈಸಲಾಗದೇ ಕಂಪನಿ ಪರದಾಡುತ್ತಿದೆ.
ದೇವರಾಣೆಗೂ ನಾವು ಸ್ವಿಫ್ಟ್ ಖರೀದಿಸಲು ಅಲ್ಲಿಗೆ ಹೋದದಲ್ಲ. ಹೀಗಾಗಿ ವಾಪಸ್ ಬಂದು ಬಿಟ್ಟೆವು. ಆದರೂ ಆ ಹುಡುಗಿಯ ನಗು ಆಗಾಗ ಕಣ್ಣ ಎದುರಿಗೆ ಬರುತ್ತಿದೆ.


Click it and Unblock the Notifications