ಬೆಂಗಳೂರು ಕ್ಷೌರಿಕನ ಬಳಿ ಲಕ್ಷುರಿ ಕಾರುಗಳು ಬಾಡಿಗೆಗಿವೆ!!

ಹೆಸರು ಸುರೇಶ್ ಬಾಬು. ವಯಸ್ಸು 40. ಬೆಂಗಳೂರಿನ ಶ್ರೀಮಂತ ಭಾಗವೊಂದಾದ ಬ್ರಿಗೆಡ್ ಇನ್ಶುಟ್ಯೂಟ್" ಬಳಿ ಇವರ ಬಾರ್ಬರ್ ಶಾಪಿದೆ. ಇವರಿಗೆ ಐಷಾರಾಮಿ ಕಾರುಗಳ ಸಂಗ್ರಹದ ಹುಚ್ಚು. ಕೋಟ್ಯಾಧಿಪತಿಗಳಲ್ಲಿ ಮಾತ್ರ ಕಾಣಸಿಗುವ ರೋಲ್ಸ್ ರಾಯ್ಸ್ ಮತ್ತು ಬಿಎಂಡಬ್ಲ್ಯು ಇತ್ಯಾದಿ ಕಾರುಗಳು ಇವರ ಬಳಿಯಿದೆ.
ಬಾರ್ಬರ್ ದುಬಾರಿ ಕಾರುಗಳನ್ನು ಖರೀದಿಸಿದ್ದು ಹೇಗೆ ಎನ್ನುವಿರಾ? ತಾನು ಕಷ್ಟಪಟ್ಟು ಗಳಿಸಿ ಕೂಡಿಟ್ಟ ಹಣವನ್ನು ಐಷಾರಾಮಿ ಕಾರುಗಳಿಗೆ ಸುರಿದಿದ್ದಾರೆ. ಇದಕ್ಕಾಗಿ ದೊಡ್ಡ ಮೊತ್ತದ ಬ್ಯಾಂಕ್ ಸಾಲವನ್ನೂ ಪಡೆದಿದ್ದಾರೆ. ಬ್ಯಾಂಕ್ ಗೆ ಪ್ರತಿತಿಂಗಳೂ ಸುಮಾರು 7 ಲಕ್ಷ ರೂಪಾಯಿಯಷ್ಟು ಪಾವತಿಸುತ್ತಿದ್ದಾರಂತೆ.
ಜೊತೆಗೆ ಅವರಿಗೆ ಸಾಕಷ್ಟು ಶ್ರೀಮಂತ ಗ್ರಾಹಕರಿದ್ದಾರೆ. ಬಾಲಿವುಡ್, ಟಾಲಿವುಡ್ ನ ಸಾಕಷ್ಟು ಗ್ರಾಹಕರೂ ಇವರಲ್ಲಿಗೆ ಬರುತ್ತಾರೆ. ಇವರು ರೆಗ್ಯುಲರ್ ಗ್ರಾಹಕರಿಗೆ ಹೇರ್ ಕಟ್ಟಿಂಗ್ ಗೆ ಜಾಸ್ತಿ ದುಡ್ಡು ತೆಗೆದುಕೊಳ್ಳುತ್ತಾರೆ ಎಂದು ಭಾವಿಸಬೇಡಿ. ಕ್ಷೌರಕ್ಕೆ ಈಗಲೂ ಅವರು ತೆಗೆದುಕೊಳ್ಳುವುದು 65 ರೂಪಾಯಿಯಂತೆ.
ತನ್ನ ರೋಲ್ಸ್ ರಾಯ್ಸಿ ಕಾರನ್ನು ಟ್ರಾವೆಲ್ ಏಜೆನ್ಸಿಯೊಂದರ ಮೂಲಕ ಬಾಡಿಗೆಗೆ ನೀಡುತ್ತಾರೆ. ಇಂತಹ ಕಾರನ್ನು ಬೆಂಗಳೂರಿನಲ್ಲಿ ಹೊಂದಿರುವುದು ಕೇವಲ ನಾಲ್ಕೇ ಜನ. ದಯಾನಂದ ಪೈ, ರಾಯಲ್ ಆರ್ಕಿಡ್ ಹೋಟೆಲ್ ನ ಮಾಲೀಕರಾದ ಬಾಲ್ಜಿ ಮತ್ತು ಗೋಲ್ಡ್ ಪಿಂಚ್ ಹೋಟೆಲ್ ನ ಪ್ರಕಾಶ್ ಶೆಟ್ಟಿಯಲ್ಲಿ ಮಾತ್ರ ಈ ಕಾರಿದೆ.
ಕೆಲವು ತಿಂಗಳ ಹಿಂದೆ ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ಸಂದರ್ಭದಲ್ಲಿ ಹೀರೋ ಹೋಂಡಾ ಚೇರ್ಮನ್ ರೋಲ್ಸ್ ರಾಯ್ಸಿ ಘೋಸ್ಟ್ ಕಾರನ್ನು ಬಾಡಿಗೆಗೆ ತೆಗೆದುಕೊಂಡಿದ್ದರಂತೆ. ಸದ್ಯ ಸುಮಾರು 8ರಿಂದ 9 ಕೋಟಿ ರೂಪಾಯಿಯ ಐಷಾರಾಮಿ ಕಾರೊಂದನ್ನು ಖರೀದಿಸುವ ಯೋಚನೆಯೂ ಇವರಿಗಿದೆ.
ಇವರಲ್ಲಿ ಇಎಸ್ ಮತ್ತು ವಿಯಾನೊ ಸರಣಿಯ ಮರ್ಸಿಡಿಸ್ ಬೆಂಝ್ ಮತ್ತು 5, 7 ಸೀರಿಸ್ ನ ಬಿಎಂಡಬ್ಲ್ಯು ಕಾರುಗಳಿವೆ. ಜೊತೆಗೆ ಸುಮಾರು 16 ಲಕ್ಷ ರೂಪಾಯಿಯ ಸುಜುಕಿ ಇಂಟ್ರಡರ್ ಎಂಬ ಬೈಕ್ ಕೂಡ ಇದೆ.
1979ರಲ್ಲಿ ಇವರ ತಂದೆ ಸತ್ತ ನಂತರ ಬ್ರಿಗೆಡ್ ರಸ್ತೆಯಲ್ಲಿರುವ ಬಾರ್ಬರ್ ಷಾಪ್ ನಿಂದ ಇವರು ಗಳಿಸುತ್ತಿದ್ದದ್ದು ದಿನಕ್ಕೆ ಕೇವಲ 5 ರೂಪಾಯಿ. ಈಗ ಇವರ ಬಳಿ 5 ಕೋಟಿ ರೂ.ಗೆ ಹತ್ತಿರವಿರುವ ಐಷಾರಾಮಿ ಕಾರುಗಳು ಬಾಡಿಗೆಗಿದೆ. ಇವರ ಜೀವನ ಕಥೆ ಮೂಲವಾಗಿರಿಸಿಕೊಂಡು ಚಲನಚಿತ್ರವೊಂದನ್ನು ಸುರೇಶ್ ರೆಡ್ಡಿ ರೆಡಿ ಮಾಡುತ್ತಿದ್ದಾರಂತೆ.


Click it and Unblock the Notifications








