ಡೀಸೆಲ್ ಟ್ರೆಂಡಿಗೆ ಪೆಟ್ರೋಲ್ ಕಾರು ಧೂಳಿಪಟ

ಡೀಸೆಲ್ ಕಾರಿನ ಬೇಡಿಕೆಗೆ ಕಾರು ಕಂಪನಿಗಳೇ ಬೆಚ್ಚಿವೆ. ಒಟ್ಟಾರೆ ಮಾರಾಟದಲ್ಲಿ ಡೀಸೆಲ್ ಕಾರುಗಳ ಪಾರಮ್ಯವೇ ಹೆಚ್ಚಿದೆ. ಪರಿಣಾಮವಾಗಿ ಮಾರಾಟದಲ್ಲಿ ಪೆಟ್ರೋಲ್ ಕಾರನ್ನು ಡೀಸೆಲ್ ಕಾರು ಹಿಂದಿಕ್ಕಿದೆ. ಸುಮ್ನೆ ಸಾರ್ ಹಾಗೇನೂ ಆಗಿಲ್ಲ ಅನ್ನುವರಿಗೆ ಸಾಕ್ಷಿ, ಅಂಕಿಅಂಶ ಸಮೇತ ಮಾಹಿತಿ ಇಲ್ಲಿದೆ.
ಮಾರುತಿ ಸುಜುಕಿ ಹೊರತಂದ ನೂತನ ಸ್ವಿಫ್ಟ್ ಸಮರ್ಥ ಉದಾಹರಣೆ. ಕಂಪನಿಯು ಸ್ವಿಫ್ಟ್ ಕಾರಿನ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯನ್ನು ಹೊರತಂದಿತ್ತು. ಇದರಲ್ಲಿ ಶೇಕಡ 88ರಷ್ಟು ಜನರು ಸ್ವಿಫ್ಟ್ ಡೀಸೆಲ್ ಕಾರು ಬುಕ್ಕಿಂಗ್ ಮಾಡಿದ್ದಾರೆ. ಷೆವರ್ಲೆ ಬೀಟ್ ಕಾರು ಮಾರಾಟದಲ್ಲಿ ಶೇಕಡ 80ರಷ್ಟು ಪಾಲು ಡೀಸೆಲ್ ಆವೃತ್ತಿಯದ್ದು.
ಫೋರ್ಡ್ ಫಿಗೊ ಮತ್ತು ಫಿಯೆಸ್ಟಾ ಡೀಸೆಲ್ ಆವೃತ್ತಿಯ ಮಾರಾಟದ ಪಾಲು ಕೂಡ ಶೇಕಡ 80ರಷ್ಟಿದೆ. ಟೊಯೊಟಾ ಎಟಿಯೋಸ್ ಮತ್ತು ಟೊಯೊಟಾ ಲಿವಾ ಡೀಸೆಲ್ ಆವೃತ್ತಿ ಮಾರಾಟ ಶೇಕಡ 50ರಷ್ಟಿದೆ. ವೆಂಟೊ ಮತ್ತು ಪೊಲೊ ಡೀಸೆಲ್ ಆವೃತ್ತಿ ಮಾರಾಟ ಶೇಕಡ 50ರಷ್ಟಿದೆ. ಹ್ಯುಂಡೈ ಕಂಪನಿಯ ವೆರ್ನಾ ಡೀಸೆಲ್ ಆವೃತ್ತಿ ಮಾರಾಟ ಶೇಕಡ 70ಕ್ಕೆ ತಲುಪಿದೆ.
ಗ್ರಾಹಕರು ಡೀಸೆಲ್ ಕಾರಿಗೆ ಮುಗಿಬೀಳುತ್ತಿರುವುದನ್ನು ಕಂಡು ಕಂಪನಿಗಳು ಬೆಚ್ಚಿಬಿದ್ದಿವೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಸುವುದು ಕೂಡ ಇವುಗಳಿಗೆ ಕಠಿಣವಾಗಿದೆ. "ಜಾಗತಿಕವಾಗಿ ಡೀಸೆಲ್ ಎಂಜಿನ್ ಗೆ ಅತ್ಯಧಿಕ ಬೇಡಿಕೆಯಿದ್ದು, ಸಮರ್ಪಕ ಪೂರೈಕೆಯ ಕೊರತೆ ಎದುರಿಸುತ್ತಿದ್ದೇವೆ" ಎಂದು ಹ್ಯುಂಡೈ ನಿರ್ದೇಶಕರಾದ ಅರವಿಂದ್ ಸಕ್ಸೆನಾ ಹೇಳುತ್ತಾರೆ.
ಮಾರುತಿ ಸುಜುಕಿ ಕಂಪನಿಯು ಡೀಸೆಲ್ ಎಂಜಿನ್ ಗಾಗಿ ಫಿಯೆಟ್ ಫ್ಯಾಕ್ಟರಿಯ ಕದ ಬಡಿಯುತ್ತಿದೆ. ಉಳಿದ ಕಂಪನಿಗಳು ಕೂಡ ಡೀಸೆಲ್ ಎಂಜಿನ್ ಆಮದು ಮಾಡಿಕೊಳ್ಳುವಲ್ಲಿ ಬ್ಯುಸಿಯಾಗಿವೆ. ಸರಕಾರ ಪೆಟ್ರೋಲ್ ದರದಂತೆ ಡೀಸೆಲ್ ದರವನ್ನು ಅನಿಯಂತ್ರಣಗೊಳಿಸಿದರೆ ಡೀಸೆಲ್ ಕಾರು ಮಾಲಿಕರು ತಲೆಮೇಲೆ ಕೈಯಿಟ್ಟುಕೊಳ್ಳಬೇಕಷ್ಟೇ!


Click it and Unblock the Notifications








