ಇಂಡಿಕಾರ್ ರೇಸ್ ಡ್ರೈವರ್ ಡ್ಯಾನ್ ದುರ್ಮರಣ
ಇಂತಹ ಸಾಹಸಮಯ ಕ್ರೀಡೆಯಲ್ಲಿ ಜಾಗತಿಕವಾಗಿ ಜನಪ್ರಿಯ ಚಾಲಕನೊಬ್ಬ ನಿನ್ನೆ(ಭಾನುವಾರ) ಮೃತಪಟ್ಟಿದ್ದಾನೆ. ಹೆಸರು ಡ್ಯಾನ್ ವೆಲ್ಡೊನ್(Dan Wheldon). ವಯಸ್ಸು 33. ಆತ ಲಾಸ್ ವೇಗಸ್ ಮೋಟರ್ ಸ್ಪೀಡಿವೇ ಸ್ಪರ್ಧೆಯಲ್ಲಿ ಇಂಡಿಕಾರ್ ಡ್ರೈವ್ ಮಾಡುತ್ತಿದ್ದ.
ಘಟನೆ ವಿವರ: ಲಾಸ್ ವೇಗಸ್ 300 ಇಂಡಿಕಾರ್ ಸೀರಿಸ್ ಫೈನಲ್ ಸ್ಪರ್ಧೆ. ಅಂತಿಮ ಸುತ್ತಿನ ಹಣಾಹಣಿಗೆ ಮುನ್ನ ಹಸಿರು ಬಾವುಟ ತೋರಿಸಿದ ತಕ್ಷಣ 30 ರೇಸ್ ಕಾರುಗಳು ವೇಗವನ್ನೇ ಆಪೋಶನ ತೆಗೆದುಕೊಳ್ಳುತ್ತ ಹೊರಟವು. ಅರ್ಧ ದಾರಿಯಲ್ಲಿ ವೆಲ್ಡೊನ್ ಕಾರು ಮತ್ತೊಂದು ಕಾರಿಗೆ ತಾಗಿ ಬೆಂಕಿಯ ಕಿಡಿಯೆದ್ದಿತ್ತು.
ರಸ್ತೆ ಬಿಟ್ಟು ಮೇಲೆ ನೆಗೆದ ಡ್ಯಾನ್ ಕಾರು ಬೇರೊಂದು ರೇಸ್ ಕಾರಿನ ಮೇಲೇರಿ ಮತ್ತೆ ಹಲವು ಕಾರುಗಳಿಗೆ ಡಿಕ್ಕಿ ಹೊಡೆಯಿತು. ಅದಕ್ಕೆ ಇತರ ರೇಸ್ ಕಾರುಗಳು ಡಿಕ್ಕಿಯಾದವು. ತಕ್ಷಣ ಕೆಂಪು ಬಾವುಟ ತೋರಿಸಲಾಯಿತು. ಡ್ಯಾನ್ ನನ್ನು ಆಸ್ಪತ್ರೆಗೆ ಕರೆದೊಯ್ದರೂ ಡ್ಯಾನ್ ಉಸಿರಿನ ವೇಗ ಕಡಿಮೆಯಾಗಿ ಶೂನ್ಯವಾಗಿತ್ತು.
ರೇಸ್ ಕ್ಯಾನ್ಸಲ್ ಆಯ್ತು. ನಂತರ ಕಂಡುಬಂದದ್ದು ಆತನ ಸ್ನೇಹಿತರು, ಬಂಧು ಬಳಗ, ಸಹ ಚಾಲಕರ ಕಣ್ಣೀರು. "ನನ್ನ ಜೀವಮಾನದಲ್ಲಿ ಇಂತಹ ದುರಂತವನ್ನು ಕಂಡಿಲ್ಲ" ಎಂದು ಇಂಡಿಕಾರ್ ಜನಪ್ರಿಯ ರೇಸ್ ಚಾಲಕ ಡೆನಿಕಾ ಹೇಳಿ ಕಣ್ಣೊರೆಸಿಕೊಂಡರು.
ಯಾರಿವನು ಡ್ಯಾನ್: ಡೇನಿಯಲ್ ಕ್ಲೈವ್ ಡ್ಯಾನ್ ವೆಲ್ಡನ್ ಹುಟ್ಟಿದ್ದು 1978ರ ಜೂನ್ 22. ಆತ ಇಂಡಿಯಾನಾಪೊಲಿಸ್ 500 ಎಂಬ ಫೇಮಸ್ಸ್ ರೇಸಿಂಗ್ ನಲ್ಲಿ ಎರಡು ಬಾರಿ(2005ರಲ್ಲಿ ಮತ್ತು 2011ರಲ್ಲಿ) ಚಾಂಪಿಯನ್ ಪಡೆದಿದ್ದ.
ಡ್ಯಾನ್ ವೆಲ್ಡೊನ್ ಹುಟ್ಟಿದು ಇಂಗ್ಲೆಂಡಿನಲ್ಲಿ. ತನ್ನ ಶಾಲಾ ದಿನಗಳಲ್ಲಿಯೇ ಜೂನಿಯರ್ ರೇಸಿಂಗ್ ಸ್ಪರ್ಧೆಯಲ್ಲಿ ಪದಕ ಬಾಚಿಕೊಳ್ಳುತ್ತಿದ್ದ. ಆತನಿಗೆ ಓದಿಗಿಂತ ರೇಸ್ ಹುಚ್ಚು ಜಾಸ್ತಿ. ತನ್ನ ಆರಂಭಿಕ ರೇಸಿಂಗ್ ದಿನಗಳಲ್ಲಿ ಓಪನ್ ವೀಲ್ ರೇಸಿಂಗ್ ಮಾಡುತ್ತಿದ್ದ.
ಜಾಗತಿಕ ಜನಪ್ರಿಯ ರೇಸಿಂಗ್ ಪ್ರಶಸ್ತಿಗಳನ್ನೆಲ್ಲ ಬಾಚಿಕೊಳ್ಳಲು ಸುರುಮಾಡಿಕೊಂಡ ಡ್ಯಾನ್ ನಂತರ ಹಿಂತುರುಗಿ ನೋಡಲೇ ಇಲ್ಲ. ವೆಲ್ಡೊನ್ 2008ರಲ್ಲಿ ಸುಸಿ ಬೆಹಾಮ್ ಎಂಬಾಕೆಯನ್ನು ಮದುವೆಯಾಗಿದ್ದ. ಆತನಿಗೆ ಎರಡು ಮಕ್ಕಳು. ಹೆಸರು ಸೆಬಸ್ಟಿಯನ್ ಮತ್ತು ಒಲಿವರ್.


Click it and Unblock the Notifications









