ಆಸ್ಟನ್ ಮಾರ್ಟಿನ್ ಹೊಸ ಕಾರಿಗೆ ಎಷ್ಟು ಕೋಟಿ ರುಪಾಯಿ?
ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಹೆಚ್ಚಿನವರು ತದೇಕಚಿತ್ತವಾಗಿ ನೋಡಿದ್ದ ಸ್ಪೋರ್ಟಿ ವಿನ್ಯಾಸದ ಕಾರೊಂದನ್ನು ಆಸ್ಟನ್ ಮಾರ್ಟಿನ್ ಪರಿಚಯಿಸಿದೆ. ಆಸ್ಟನ್ ಮಾರ್ಟಿನ್ ಫ್ಯಾಕ್ಟರಿಯಿಂದ ಹೊರಬಂದ ನೂತನ ಕಾರಿನ ಹೆಸರು ವ್ಯಾಂಗಿಷ್. ಇದರ ದರ 1,90,000 ಪೌಂಡ್. ಅಂದರೆ ಸುಮಾರು 1.66 ಕೋಟಿ ರುಪಾಯಿ.
ಆಸ್ಟನ್ ಮಾರ್ಟಿನ್ ಕಂಪನಿಯು ನೂತನ ವ್ಯಾಂಗಿಷ್ ಕಾರನ್ನು ದೇಶದ ರಸ್ತೆಗೆ ಯಾವಾಗ ಪರಿಚಯಿಸಲಿದೆ ಎಂದು ಹೇಳಿಲ್ಲ. ಶೀಘ್ರದಲ್ಲಿ ಇದರ ಭಾರತದ ದರ ಮಾಹಿತಿಯನ್ನು ಕಂಪನಿ ಪ್ರಕಟಿಸುವ ನಿರೀಕ್ಷೆಯಿದೆ. ಇದು ಶಕ್ತಿಶಾಲಿ, ದಕ್ಷತೆಯ, ಪರಿಸರ ಸ್ನೇಹಿ ಮತ್ತು ವಿನೂತನ ತಂತ್ರಜ್ಞಾನದ ಎಂಜಿನ್ ಹೊಂದಿದೆ.
ನೂತನ ಆಸ್ಟನ್ ಮಾರ್ಟಿನ್ ವ್ಯಾಂಗಿಷ್ ಕಾರು ವಿ12 ಎಂಜಿನ್ ಹೊಂದಿದ್ದು, 565 ಅಶ್ವಶಕ್ತಿ ನೀಡುತ್ತದೆ. ಇದರಲ್ಲಿ ಕೇವಲ 4.1 ಸೆಕೆಂಡಿನಲ್ಲಿ ಸೊನ್ನೆಯಿಂದ 100 ಕಿ.ಮೀ. ವೇಗ ಪಡೆದುಕೊಳ್ಳಬಹುದು. ನೂತನ 6.0 ಲೀಟರಿನ ವಿ12 ಎಂಜಿನ್ ಈ ಹಿಂದಿನ ಎಂಜಿನಿಗಿಂತಲೂ ಶಕ್ತಿಶಾಲಿ ಎಂದು ಕಂಪನಿಯು ತಿಳಿಸಿದೆ.
ಸುಂದರವಾದ ಸ್ಪೋರ್ಟ್ಸ್ ಕಾರುಗಳನ್ನು ನಿರ್ಮಿಸುವಲ್ಲಿ ಆಸ್ಟನ್ ಮಾರ್ಟಿನ್ ಹೆಸರುವಾಸಿ. ನೂತನ ವ್ಯಾಂಗಿಷ್ ಕಾರು ಕೂಡ ಚಿತ್ತಾಕರ್ಷಕವಾಗಿದೆ. ಇದರ ಕೆಲವು ಭಾಗದ ವಿನ್ಯಾಸ ಒನ್-77 ಸೂಪರ್ ಕಾರನ್ನು ನೆನಪಿಸುತ್ತದೆ. "ಭವಿಷ್ಯದ ಐಷಾರಾಮಿ ಕಾರುಗಳ ಭಾಷ್ಯವನ್ನೇ ಆಸ್ಟನ್ ಮಾರ್ಟಿನ್ ವ್ಯಾಂಗಿಷ್ ಬದಲಾಯಿಸಲಿದೆ" ಎಂದು ನೂತನ ಕಾರಿನ ಕುರಿತು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪನಿಯು ನೂತನ ಕಾರನ್ನು ಹೆಚ್ಚು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಿದೆ. ಎಂಜಿನ್ ತಂತ್ರಜ್ಞಾನ ಮತ್ತು ವಿನ್ಯಾಸದಿಂದಾಗಿ ಪರಿಸರಕ್ಕೆ ಹೊರಸೂಸುವ ಇಂಗಾಲ ಕಡಿಮೆಯಾಗಿದೆ ಎಂದು ಕಂಪನಿ ಹೇಳಿದೆ. ಕಂಪನಿಯು ಹಳೆಯ ಡಿಬಿಎಸ್ ಆವೃತ್ತಿಯ ಸ್ಥಾನಕ್ಕೆ ನೂತನ ಕಾರನ್ನು ಪರಿಚಯಿಸಿದೆ.


Click it and Unblock the Notifications









