ಪುಟ್ಟನಿಗೆ ಕಾರಿಷ್ಟ, ಪಿಂಕಿಗೆ ಗೊಂಬೆ ಇಷ್ಟ, ನಿಮ್ಗೆ ಏನಿಷ್ಟ?

ಮುಖ್ಯವಾಗಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸೈಕಲ್ ಟೈರ್ ಆಡೋದು ಇಷ್ಟ. ನಗರಗಳಲ್ಲಿನ ಮಕ್ಕಳು ಕಾರುಬೈಕು ಗೇಮುಗಳಲ್ಲಿ ಕಾಲಕಳಿತಾರೆ. ಆಟಿಕೆ ವಿಷ್ಯದಲ್ಲಿ ಹೆಣ್ಮಕ್ಲಿಗೆ ಕಾರು ಬೈಕು ಅಂದ್ರೆ ಅಷ್ಟಕಷ್ಟನೇ. ಅವ್ರಿಗೆ ಟೆಡ್ಡಿಬೇರ್, ಡಾಲ್ಸ್ ಇಷ್ಟ. ಬೊಂಬೆಗೆ ಬೊಟ್ಟು ಇಡೋದು, ತಲೆಕೂದಲು ಬಾಚುವುದು, ಬೊಂಬೆ ಜೊತೆ ಮಾತನಾಡುವುದು ಮಾಡುತ್ತಾರೆ.
ಹುಡುಗರಿಗೆ ಗೊಂಬೆ ಕೊಟ್ರೆ ಅದರ ಕಾಲು ಮರಿದು ಹಾಕ್ತಾರೆ. ವಾಹನ ಸಂಬಂಧಿತ ಆಟಿಕೆಗಳಂದ್ರೆ ಪಂಚಪ್ರಾಣ. ಆಟಿಕೆ ಕಾರು ಸಿಕ್ರೆ ಸಾಕು, ಟೇಬಲಿನಿಂದ ಹಿಡಿದು, ಬಾಗಿಲು ದಾರಂದ, ಕಿಟಕಿ ಮೇಲೆಲ್ಲ ಕಾರು ಹತ್ತಿಸ್ತಾರೆ. ಜಾಸ್ತಿ ಸ್ಪೀಡ್ ಆಗಿ ಗಾಡಿ ಬಿಡುವುದು ಕೂಡ ಅವರಿಗಿಷ್ಟ. ಬಾಯಲ್ಲಿ ಬೂ... ಅಂತ ಸದ್ದು ಮಾಡಿ ಕೊನೆಗೆ ದಡಿಲ್ ಅಂತ ಎಲ್ಲಾದ್ರೂ ಗುದ್ದಿ ಆಕ್ಸಿಡೆಂಟ್ ಮಾಡಿ ನಗ್ತಾರೆ.
ಬರೀ ಆಟಿಕೆ ವಿಷ್ಯದಲ್ಲಿ ಮಾತ್ರವಲ್ಲ. ವಿಡಿಯೋ ಗೇಮಲ್ಲೂ ಗಂಡುಮಕ್ಕಳಿಗೆ ಕಾರು ಬೈಕು ರೇಸ್ ಇಷ್ಟ. ಎಫ್1 ರೇಸ್ ಗಳನ್ನು ಟಿವಿಯಲ್ಲಿ ಹೆಚ್ಚು ಮಕ್ಕಳು ಕುತೂಹಲದಿಂದ ನೋಡುತ್ತಾರೆ. ಚಿಕ್ಕ ಹುಡುಗ ತನ್ನ ಅಪ್ಪ ಅಥವಾ ಅಮ್ಮನಲ್ಲಿ ಆಟಿಕೆ ಕಾರಿಗಾಗಿ ರಚ್ಚೆ ಹಿಡಿಯುತ್ತಾನೆ. ಸ್ವಲ್ಪ ದೊಡ್ಡವನಾದ ನಂತ್ರ ನಿಜವಾದ ಕಾರು ಖರೀದಿಸ್ತಾನೆ.
ಸಿಟಿ ಯುನಿವರ್ಸಿಟಿ ರಿಸರ್ಚ್ ಅಧ್ಯಯನ ಕೂಡ ಗಂಡು ಮತ್ತು ಹೆಣ್ಣು ಮಕ್ಕಳ ಈ ಆಟಿಕೆ ವಿಭಿನ್ನತೆಯನ್ನು ಕಂಡುಕೊಂಡಿದೆ. ವಿವಿಧ ವಯಸ್ಸಿನ ಮಕ್ಕಳನ್ನು ಆಯ್ಕೆ ಮಾಡಿ ಅಧ್ಯಯನ ನಡೆಲಾಯಿತು. ಎಲ್ಲರನ್ನೂ ವೈವಿಧ್ಯಮಯ ಆಟಿಕೆಗಳ ಮುಂದೆ ನಿಲ್ಲಿಸಲಾಯಿತು. ಹೆಚ್ಚಿನ ಹುಡುಗರು ಬಾಲ್ ಮತ್ತು ಕಾರುಗಳನ್ನು ತೆಗೆದುಕೊಂಡ್ರು. ಹೆಣ್ಮಕ್ಲು ಬೊಂಬೆ ಆಯ್ಕೆಯಲ್ಲಿ ಬ್ಯುಸಿಯಾಗಿದ್ರಂತೆ.
ಇನ್ನೊಂದು ಅಧ್ಯಯನದ ಪ್ರಕಾರ ಮಹಿಳೆಯರು ಕಾರಿನಲ್ಲಿ ಪುರುಷರ ಪಕ್ಕದಲ್ಲಿ ಪ್ಯಾಸೆಂಜರ್ ಆಗಿ ಕುಳಿತುಕೊಳ್ಳಲು ಇಷ್ಟಪಡ್ತಾರಂತೆ. ಅವ್ರಿಗೆ ತಮ್ಮ ಸಂಗಾತಿ ಡ್ರೈವ್ ಮಾಡೋದು ಅಂದ್ರೆ ಇಷ್ಟ ಅಂತೆ. ಕಾರಿರೋ ಹುಡುಗ್ರನ್ನ, ಹುಡುಗಿರು ಇಷ್ಟಪಡೋದ್ಯಾಕೆ ಅನ್ನೋ ಪ್ರಶ್ನೆಗೂ ಇಲ್ಲೇ ಉತ್ತರವಿದೆ. ಒಟ್ಟಾರೆ ಮಹಿಳೆಯರಿಗೆ ಹೋಲಿಸಿದರೆ ವಾಹನವನ್ನು ಹೆಚ್ಚು ಇಷ್ಟಪಡೋದು ಪುರುಷರು.
2002ರಲ್ಲಿ ಇನ್ನೊಂದು ಇಂಟ್ರೆಸ್ಟಿಂಗ್ ಅಧ್ಯಯನವನ್ನು ಟೆಕ್ಸಾಸ್ ನ ಎಆಂಡ್ಎಂ ಯುನಿವರ್ಸಿಟಿ ನಡೆಸಿತ್ತು. ಇದಕ್ಕೆ ಲಂಡನಿನ ವಿಜ್ಞಾನ ಸಂಸ್ಥೆಯೊಂದು ಸಹಯೋಗ ನೀಡಿತ್ತು. ಅಲ್ಲಿ 44 ಗಂಡು ಮತ್ತು 44 ಹೆಣ್ಣು ಮಂಗಗಳನ್ನು ಆಟಿಕೆಗಳ ಮುಂದೆ ಬಿಡಲಾಯಿತ್ತಂತೆ. ಅಚ್ಚರಿಯೆಂಬಂತೆ ಹೆಚ್ಚಿನ ಹೆಣ್ಣು ಮಂಗಗಳು ಗೊಂಬೆಯಂತಹ ಹಗುರ ಆಟಿಕೆ ಆಯ್ಕೆ ಮಾಡಿದ್ದವು. ಗಂಡು ಮಂಗಗಳು ಭಾರವಿರುವ ಕಾರು, ಜೀಪು, ಟ್ರಕ್ ಆಟಿಕೆಗಳನ್ನು ಆಯ್ಕೆಮಾಡಿದ್ದವಂತೆ. ಮತ್ತೆ.. ಮಂಗನಿಂದ ಮಾನವ ಅಂತ ಹೇಳೋದು ಸುಳ್ಳಾ?
ಅಂದ್ಹಾಂಗೆ ಚಿಕ್ಕದಾಗಿದ್ದಾಗ ನಿಮ್ಗೆ ಯಾವ ಆಟಿಕೆ ಇಷ್ಟ ಆಗಿತ್ತು?


Click it and Unblock the Notifications








