ಆಟಿಕೆಯಲ್ಲ, ರಿಮೋಟ್ ಕಂಟ್ರೋಲ್ ಕಾರು ಬಂದಿದೆ!
ಚೀನಾದ ಕಾರು ತಯಾರಿಕಾ ಕಂಪನಿ ಬಿವೈಡಿ ಇಂತಹ ರಿಮೋಟ್ ಕಂಟ್ರೋಲ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸು ರುಯಿ ಹೆಸರಿನ ಈ ಕಾರನ್ನು ನಿಗದಿತ ವ್ಯಾಪ್ತಿಯಲ್ಲಿ ರಿಮೋಟ್ ಕಂಟ್ರೋಲ್ ಮೂಲಕ ಚಾಲನೆ ಮಾಡಬಹುದಾಗಿದೆ.
ಕಾರಿನ ಒಳಗೆ ಡ್ರೈವರ್ ಇಲ್ಲದಿದ್ದರೂ ರಿಮೋಟ್ ಕಂಟ್ರೋಲ್ ಮೂಲಕ ನೀವು ಕಾರನ್ನು ಹಿಂದಕ್ಕೆ, ಮುಂದಕ್ಕೆ, ಬಲಕ್ಕೆ ಅಥವಾ ಎಡಕ್ಕೆ ಚಲಾಯಿಸಬಹುದು. ಈ ಸೌಲಭ್ಯವು ಕಾರು ಪಾರ್ಕ್ ಮಾಡಲು ಅತ್ಯಂತ ಸೂಕ್ತವಾಗಿದೆ. ರಿಮೋಟ್ ಕಂಟ್ರೋಲ್ ಕಾರುಗಳಿಗೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಕಂಪನಿ ಹೇಳಿದೆ.
ರಿಮೋಟ್ ಕಂಟ್ರೋಲ್ ಕಾರಿನಿಂದ ಹಲವು ಉಪಯೋಗಗಳಿವೆ. ಎಲ್ಲಾದರೂ ಜೋರು ಮಳೆ ಸುರಿಯುತ್ತಿದೆ ಎಂದಿಟ್ಟುಕೊಳ್ಳಿ. ಶೆಡ್ ನಿಂದ ಕಾರನ್ನು ನಿಮ್ಮ ಮನೆಯ ಮುಂದೆ ತರಲು ಹೋದರೆ ನೀವು ಒದ್ದೆಯಾಗುವುದು ಗ್ಯಾರಂಟಿ. ರಿಮೋಟ್ ಕಂಟ್ರೋಲ್ ಮೂಲಕ ಶೆಡ್ ನಿಂದ ಮನೆಯ ಮುಂಭಾಗಕ್ಕೆ ಕಾರು ತಂದರೆ ಆಯ್ತು.
ಕಾರಿನ ಒಳಗೆ ಪ್ರವೇಶಿಸುವಾಗ ತುಂಬಾ ಬಿಸಿಯಾಗಬಹುದು. ಆಮೇಲೆ ಏಸಿ ಆನ್ ಮಾಡಿ ಅದು ಕೂಲ್ ಮಾಡುವಾಗ ನೀವು ಬೆವರಿ ಒದ್ದೆಯಾದರೂ ಆದೀರಿ. ಅದಕ್ಕೆ ಕಾರಿನೊಳಗೆ ಪ್ರವೇಶಿಸುವ ಮುನ್ನವೇ ಈ ರಿಮೋಟ್ ಕಂಟ್ರೋಲ್ ಮೂಲಕ ಏಸಿ ಆನ್ ಮಾಡಬಹುದು. ನೀವು ಕಾರು ಪ್ರವೇಶಿಸುವಾಗ ಕೂಲ್ ಕೂಲ್!
ಸು ರುಯಿ ಮಾತ್ರ ರಿಮೋಟ್ ಡ್ರೈವಿಂಗ್ ಟೆಕ್ನಾಲಜಿ ಹೊಂದಿರುವ ಉತ್ಪನ್ನವಾಗಿದೆ ಎಂದು ಬಿವೈಡಿ ಪ್ರತಿಪಾದಿಸಿದೆ. 2012ರ ಬೀಜಿಂಗ್ ವಾಹನ ಪ್ರದರ್ಶನದಲ್ಲಿ ಈ ರಿಮೋಟ್ ಡ್ರೈವಿಂಗ್ ಕಂಟ್ರೋಲ್ ತಂತ್ರಜ್ಞಾನಕ್ಕೆ ಅತ್ಯುತ್ತಮ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ ದೊರಕಿತ್ತು.
ವಾಹನೋದ್ಯಮದಲ್ಲಿ ಮಧ್ಯಮ ಗಾತ್ರದ ರಿಮೋಟ್ ಕಂಟ್ರೋಲ್ ಡ್ರೈವಿಂಗ್ ಫ್ಯಾಮಿಲಿ ಕಾರು ಹೊಸ ಶಖೆ ಆರಂಭಿಸುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ. ಅಂದಹಾಗೆ ಈ ಕಾರಿನಲ್ಲಿ ರಿಮೋಟ್ ಕಂಟ್ರೋಲ್ ಮಾತ್ರ ಇರುವುದಲ್ಲ. ಇದರಲ್ಲಿ ಹಲವು ಗಿಜ್ಮೋ, ಗ್ಯಾಡ್ಜೆಟುಗಳು ಇವೆ.
9ನೇ ತಲೆಮಾರಿನ ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಎಲೆಕ್ಟ್ರಿಕ್ ಪಾರ್ಕ್ ಬ್ರೇಕ್ ಸಿಸ್ಟಮ್, ರಿಮೋಟ್ ಕಂಟ್ರೋಲ್ ಪವರ್ ವಿಂಡೋಸ್ ಸೇರಿದಂತೆ ಹತ್ತು ಹಲವು ಅತ್ಯಾಧುನಿಕ ಫೀಚರುಗಳು ಈ ಕಾರಿನಲ್ಲಿವೆ.
ನೂತನ ಬಿವೈಡಿ ಸು ರುಯಿ ಕಾರು 1.5 ಲೀಟರ್ ಟಿಐಡಿ, 1.5 ಲೀಟರಿನ ಟಿಐ ಮತ್ತು 1.5 ಲೀಟರಿನ ಟಿಎಲ್ ಎಂಬ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಈ ಕಾರಲ್ಲಿ ಕೇವಲ 8.9 ಸೆಕೆಂಡಿನಲ್ಲಿ ಸೊನ್ನೆಯಿಂದ 100 ಕಿ.ಮಿ. ವೇಗ ಪಡೆಯಬಹುದಾಗಿದೆ. 100 ಕಿ.ಮೀ. ಪ್ರಯಾಣಕ್ಕೆ ಸುಮಾರು 6.5 ಲೀಟರ್ ಇಂಧನ ಬೇಕಿದೆ. ಈ ಕಾರು ಸದ್ಯ ಭಾರತಕ್ಕೆ ಆಗಮಿಸುವ ಸೂಚನೆಗಳಿಲ್ಲ.


Click it and Unblock the Notifications









