ವೈ ದಿಸ್ ಕೊಲವೆರಿ ಧನುಷ್ ಹೊಸ ಫಿಲ್ಮ್, ಯಾವುದದು?

ನೂತನ ನ್ಯಾನೊ ಜಾಹೀರಾತು ವಿಡಿಯೋ ಕನ್ನಡ ಡ್ರೈವ್ ಸ್ಪಾರ್ಕಿಗೆ ಲಭ್ಯವಾಗಿದೆ. ಈಗಾಗಲೇ ನಮ್ಮ ಫೇಸ್ಬುಕ್ ಪುಟದಲ್ಲಿ ನೂರಾರು ಜನರು ಇದನ್ನು ಲೈಕ್ ಮಾಡಿರುವುದು ಮತ್ತು ಹಂಚಿಕೊಂಡಿರುವುದೇ ಇದರ ಜನಪ್ರಿಯತೆಗೆ ಸಾಕ್ಷಿ. ಇಲ್ಲೂ ಕೊಲವೆರಿ ನೆರಳಿದೆ.
ಅಗ್ಗದ ಟಾಟಾ ನ್ಯಾನೊ ಕಾರು ಹೇಗೆ ಗ್ರೇಟ್ ಅಂತ ಈ ಪುಟ್ಟ ವಿಡಿಯೋದಲ್ಲಿ ಮನೋಜ್ಞವಾಗಿ ಕಟ್ಟಿಕೊಡಲಾಗಿದೆ. ನ್ಯಾನೊ ಕಾರಿನ ದಕ್ಷತೆ, ನಗರದ ರಸ್ತೆಗೆ ಅದರ ಪ್ರಸ್ತುತತೆ, ಕಡಿಮೆ ಸ್ಥಳದಲ್ಲಿ ಪಾರ್ಕಿಂಗ್ ಮಾಡಬಹುದು ಎಂಬೆಲ್ಲ ಸಂಗತಿಗಳನ್ನು ಕೆಲವೇ ಸೆಕೆಂಡಿನಲ್ಲಿ ಅದ್ಭುತವಾಗಿ ಹೇಳಲಾಗಿದೆ.
ವಿಡಿಯೋ ದೃಷ್ಯಗಳನ್ನು ನೋಡಿದರೆ ಅದು ಮುಂಬೈನಲ್ಲಿ ಶೂಟಿಂಗ್ ನಡೆಸಿದಂತೆ ಇದೆ. ಯುವಕನೊಬ್ಬ(ಧನುಷ್) ನ್ಯಾನೊ ಕಾರು ಖರೀದಿಸುವುದು, ಅದರಿಂದ ಸಂಭ್ರಮಿಸುವ ಆತನ ಕುಟುಂಬ, ಕೊಲವೆರಿ ಟ್ಯೂನಲ್ಲಿ "ಟಾಟಾ ನ್ಯಾನೊ ಟಾಟಾ ನ್ಯಾನೊ" ಎಂಬ ಹಾಡು ಇಷ್ಟವಾಗುತ್ತದೆ.
ಇದರಲ್ಲಿರುವ ಕೆಲವೊಂದು ನಾಟಕೀಯ ಸೀಕ್ವೆನ್ಸ್ ಗಳು ಇಷ್ಟವಾಗುತ್ತದೆ. ಒಂದು ಕಡೆ ಪಾರ್ಕಿಂಗ್ ಸ್ಥಳ ತುಂಬಿದೆ, ಮುಂದಕ್ಕೆ ಹೋಗಿ ಎಂದು ಸೆಕ್ಯುರಿಟಿ ಹೇಳಿದರೂ ನಸುನಗುತ ಧನುಷ್ ಅಲ್ಲಿರುವ ಕೊಂಚ ಸ್ಥಳಾವಕಾಶದಲ್ಲಿ ನ್ಯಾನೊ ಪಾರ್ಕ್ ಮಾಡುತ್ತಾನೆ. ನ್ಯಾನೊ ಕಾರಿಗೆ ಪಾರ್ಕಿಂಗ್ ಸ್ಥಳಾವಕಾಶ ಕಡಿಮೆ ಸಾಕು ಅಂತ ಈ ದೃಷ್ಯ ಹೇಳುತ್ತದೆ.
ಮತ್ತೊಂದು ದೃಷ್ಯದಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಅಂಬ್ಯುಲೆನ್ಸ್ ಒಂದು ಸಿಲುಕಿ ವಿಲವಿಲ ಒದ್ದಾಡುತ್ತಿರುತ್ತದೆ. ಅಂಬ್ಯುಲೆನ್ಸಿನಿಂದ ಗಾಯಗೊಂಡ ಹುಡುಗಿಯನ್ನು ನ್ಯಾನೊ ಕಾರಿಗೆ ಶಿಫ್ಟ್ ಮಾಡಿದ ಧನುಷ್ ಆ ಮಗುವನ್ನು ಟ್ರಾಫಿಕಿನಿಂದ ಬಚಾವ್ ಮಾಡಿ ಆಸ್ಪತ್ರೆಗೆ ತಲುಪಿಸುತ್ತಾನೆ. ಇಲ್ಲಿ ನ್ಯಾನೊ ಕಾರೇ ಹೀರೊ ಆಗುತ್ತದೆ.
ಹೀಗೆ ಈ ಪುಟ್ಟ ಜಾಹೀರಾತು ಫಿಲ್ಮಿನಲ್ಲಿ ಹಲವು ದೃಷ್ಯಗಳು ಇಷ್ಟವಾಗುತ್ತವೆ. ಅದರಲ್ಲಿರುವ ಟಟ್ಟಾಂ ಟಟಟ್ಟಾಂ ಅನ್ನೋ ಮ್ಯೂಸಿಕ್ ಅಂತೂ ಮಸ್ತ್ ಆಗಿದೆ. ಬನ್ನಿ ಆ ವಿಡಿಯೋ ನೋಡಿ.
ಟಾಟಾ ನ್ಯಾನೊ ರತನ್ ಟಾಟಾರ ಕನಸಿನ ಕೂಸು. ಆದರೆ ದುರಾದೃಷ್ಟವಶಾತ್ ನ್ಯಾನೊ ಮಾರಾಟಕ್ಕೆ ಹಲವು ಹಿನ್ನಡೆಗಳಾದವು. ನ್ಯಾನೊ ಕಾರಿನಲ್ಲಿ ಉಂಟಾದ ಬೆಂಕಿ ಆಕಸ್ಮಿಕಗಳು ನ್ಯಾನೊ ಮಾರಾಟಕ್ಕೆ ಪ್ರಬಲ ಹೊಡೆತವನ್ನೇ ನೀಡಿವೆ.
ಹೀಗೆ ಹಲವು ಕಾರಣಗಳಿಂದ ನ್ಯಾನೊ ಕಾರಿನ ಬಗ್ಗೆ ಜನರಲ್ಲಿ ತುಂಬಿರುವ ನಕಾರಾತ್ಮಕ ಅಂಶಗಳನ್ನು ಅಳಿಸುವ ಪ್ರಯತ್ನದಲ್ಲಿ ಕಂಪನಿಯಿದೆ. ಇದೀಗ ಕಾಲಿವುಡ್ ನಟ ಧನುಷ್ ಜೊತೆಗಿನ ನೂತನ ಆ್ಯಡ್ ಫಿಲ್ಮ್ ಮೋಡಿ ಮಾಡುವುದೋ? ಕಾದು ನೋಡಬೇಕಿದೆ.


Click it and Unblock the Notifications








