ಕಾರು ಲೊಗೊ ಕದಿಯೋ ಕಳ್ಳರಿದ್ದಾರೆ, ಎಚ್ಚರಿಕೆ!

ಕಳ್ಳ ಕದೀಮರು ಲೊಗೊ ಕದಿಯಲು ಬಿಎಂಡಬ್ಲ್ಯು, ಆಡಿ, ಫೋಕ್ಸ್ ವ್ಯಾಗನ್, ಮರ್ಸಿಡಿಸ್ ಬೆಂಜ್ ಮತ್ತು ಸ್ಕೋಡಾ ಇತ್ಯಾದಿ ದುಬಾರಿ ಕಾರುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿರುವುದು ವಿಶೇಷ.
ಇದರಿಂದ ಲೊಗೊ ಕಳೆದುಕೊಂಡ ದುಬಾರಿ ಕಾರು ಮಾಲಿಕರ ಕಿಸೆಗೆ ಸಾವಿರಾರು ರುಪಾಯಿ ಖೋತ ಬೀಳುತ್ತದೆ. ಯಾಕೆಂದರೆ ಇಂತಹ ಲೊಗೊಗಳು ಸ್ಥಳೀಯವಾಗಿ ದೊರಕುವುದಿಲ್ಲ. ಡೀಲರುಗಳಿಗೆ ತಿಳಿಸಿ ವಿದೇಶಗಳಿಂದ ಆಮದುಮಾಡಿಕೊಳ್ಳಬೇಕಾಗುತ್ತದೆ.
ಜೊತೆಗೆ ಇಂತಹ ಲೊಗೊ ಪಡೆಯಲು ಹಲವು ದಿನ ಕಾಯಬೇಕಾಗುತ್ತದೆ. ಇಂತಹ ಕಾರು ಲೊಗೊ ಕಳ್ಳರು ಸಾರ್ವಜನಿಕ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಿರುವ ಕಾರುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಅಪರೂಪಕ್ಕೊಮ್ಮೆ ಮನೆಯ ಮುಂದೆ ನಿಲ್ಲಿಸಿದ ಕಾರುಗಳಿಂದಲೂ ಲೊಗೊ ಕಳ್ಳತನವಾಗುವುದುಂಟು.
ಆತಂಕದ ವಿಷಯವೆಂದರೆ ಇಂತಹ ಲೊಗೊ ಕಳ್ಳರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳೆಂದು ಕಾರ್ ಟ್ರೇಂಡ್ ಇಂಡಿಯಾ ವರದಿ ಹೇಳಿದೆ. ಮಾನವಿಯತೆಯ ದೃಷ್ಟಿಯಿಂದ ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲಿಸುವುದು ಕಡಿಮೆ. ಮುಖ್ಯವಾಗಿ ಇಂತಹ ಕಳ್ಳರು ಸಿಕ್ಕಿಬೀಳುವುದು ಅಪರೂಪ.
ಕಾರು ಲೊಗೊ ಕಾಣೆಯಾಗಿರುವ ಕುರಿತು ಪೊಲೀಸ್ ಸ್ಟೇಷನ್ ಗಳಲ್ಲಿ ದೂರು ಕೂಡ ದಾಖಲಾಗಿಲ್ಲ. ಈ ಪುಟ್ಟ ವಿಷಯಕ್ಕೆ ದೂರು ನೀಡುವುದು ಯಾಕೆ ಎನ್ನುವ ಯೋಚನೆಯೂ ಇದರ ಹಿಂದಿರಬಹುದು. ಇದು ಕೂಡ ಲೊಗೊ ಕದಿಯುವ ಕಳ್ಳರಿಗೆ ವರವಾಗಿದೆ.
ಆದರೆ ಇಂತಹ ದುಬಾರಿ ಕಾರುಗಳ ಲೊಗೊಗಳನ್ನು ಕಳ್ಳರು ಗುಜರಿ ಅಂಗಡಿಗಳಲ್ಲಿ ಸಿಕ್ಕಿದ ದರಕ್ಕೆ ಮಾರಾಟಮಾಡುತ್ತಾರೆ. ನಿಮಗೆ ಕಡಿಮೆ ದರಕ್ಕೆ ಇಂತಹ ಲೊಗೊ ಮಾರ್ಕೆಟಿನಲ್ಲಿ ದೊರಕಿದರೆ ಅದು ಫೇಕ್ ಲೋಗೊ ಎಂದು ತೀರ್ಮಾನಿಸಬಹುದು. ಲೊಗೊಗಳಿಗೆ ಹೆಚ್ಚು ದರದ ಬೇಡಿಕೆಯಿಟ್ಟರೆ ಅದು ಕಳ್ಳತನದ ಲೊಗೊ ಎನ್ನುವುದರಲ್ಲಿ ಸಂಶಯವಿಲ್ಲ.
ಮುಂಬೈನಲ್ಲೂ ಇಂತಹ ಕಾರು ಲೊಗೊ ಕಳ್ಳರಿದ್ದಾರೆ. ಈಗಾಗಲೇ ಮುಂಬೈನ ಕೆಲವರು ಫೇಸ್ ಬುಕ್ ನಲ್ಲಿ ಈ ಕುರಿತು ಅವಲತ್ತುಗೊಂಡಿದ್ದಾರೆ. ಸ್ಕೋಡಾ ಕಾರಿನ ಲೊಗೊ ಕಳ್ಳರ ಪ್ರಮುಖ ಟಾರ್ಗೆಟ್ ಅಂತೆ. ಯಾವುದಕ್ಕೂ ನಿಮ್ಮ ಕಾರಿನ ಲೊಗೊ ಮೇಲೊಂದು ನಿಗಾವಿಡಿ.


Click it and Unblock the Notifications








