ದೇಶಿಯವಾಗಿ ಬಿಡಿಭಾಗ ಜೋಡಣೆ; ಪಜೆರೊ ಸ್ಪೋರ್ಟ್ ದರ ಕಡಿತ
ಜಪಾನ್ ಪಾಟ್ನರ್ ಮಿಟ್ಸುಬಿಸಿ ಕಂಪನಿಯ ಜತೆಸೇರಿ ಪಜೆರೊ ಸ್ಪೋರ್ಟ್ ಬಿಡುಗಡೆ ಮಾಡಿರುವ ಹಿಂದೂಸ್ತಾನ್ ಮೋಟಾರ್ಸ್ ಇದೀಗ ಕಾರಿನ ಬಿಡಿಭಾಗ ಜೋಡಣೆಗಳನ್ನು ದೇಶಿಯವಾಗಿ ನಿರ್ಮಿಸುವ ಮಹತ್ತರ ಯೋಜನೆಗೆ ಮುಂದಾಗಿದ್ದು, ಇದರಂತೆ ಕಾರಿನ ದರದಲ್ಲೂ 1.87 ಲಕ್ಷ ರುಪಾಯಿಗಳಷ್ಟು ಭಾರಿ ಇಳಿಕೆ ಕಂಡುಬಂದಿದೆ.
ದೆಹಲಿ ಎಕ್ಸ್ ಶೋರೂಂಗಳಲ್ಲಿ ಪಜೆರೊ ಸ್ಪೋರ್ಟ್ ದರವು 24.43 ಲಕ್ಷ ರುಪಾಯಿಗಳಿಷ್ಟಿತ್ತು. ಆದರೆ ಕಾರಿನ ಬಿಡಿಭಾಗ ಜೋಡಣೆಯನ್ನು ದೇಶಿಯವಾಗಿ ನಿರ್ಮಿಸಲು ಮುಂದಾಗಿರುವುದರಿಂದ ಕಾರು ಇದೀಗ 22.56 ಲಕ್ಷ ರುಪಾಯಿಗಳಿಗೆ ಲಭ್ಯವಾಗಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿಂದೂಸ್ತಾನ್ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಉತ್ತಮ್ ಬೋಸ್, ನಾವೀಗ ತಿರುವಲ್ಲೂರ್ ಘಟಕದಲ್ಲಿ ಪಜೆರೊ ಸ್ಪೋರ್ಟ್ ಕಾರಿನ ಬಿಡಿಭಾಗ ಜೋಡಣೆಯನ್ನು ಆರಂಭಿಸಿರುತ್ತೇವೆ. ಈ ಮೂಲಕ ಗ್ರಾಹಕರಿಗೆ ಸಿಹಿ ಸುದ್ದಿ ಬಿತ್ತರಿಸುತ್ತಿದ್ದೇವೆ ಎಂದಿದ್ದಾರೆ.ಅಂದ ಹಾಗೆ ಕಂಪನಿಯು ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಶೇಕಡಾ 20ರಷ್ಟು ಪಾಲು ಬಾಚಿಕೊಳ್ಳುವ ನಿರೀಕ್ಷೆ ಹೊಂದಿದೆ. ದೇಶದಲ್ಲಿ ಎಸ್‌ಯುವಿ ಬೇಡಿಕೆ ಹೆಚ್ಚಾಗಿರುವಂತೆಯೇ ಪಜೊರೊ ಕೂಡಾ ದೇಶಿಯ ಮಾರುಕಟ್ಟೆಯಲ್ಲಿ ನೆಲೆಯೂರುವ ನಂಬಿಕೆ ಹೊಂದಿದೆ.
ಪ್ರಸಕ್ತ ಶೇಕಡಾ 14ರಷ್ಟು ಪಜಾರೊ ಸ್ಪೋರ್ಟ್ ಕಾರಿನ ಬಿಡಿಭಾಗ ಜೋಡಣೆಗಳನ್ನು ದೇಶಿಯಗೊಳಿಸಲಾಗಿದೆ. ಕಾರಿನ ಬಿಡಿಭಾಗಗಳಾದ ಟಯರ್, ಬ್ಯಾಟರಿ, ವಿಂಡೊ ಗ್ಲಾಸ್, ಸೀಟ್ ಬೆಲ್ಟ್, ಲ್ಯಾಂಪ್, ವೈಪರ್ ಅಸೆಂಬ್ಲಿ, ಅಲೋಯ್ ವೀಲ್ಸ್ ಹಾಗೂ ಹೆಡ್‌ಲೈನಿಂಗ್ ದೇಶಿಯವಾಗಿ ತಯಾರಿಸಲಾಗುತ್ತದೆ. ಹಾಗೆಯೇ ಮುಂದಿನ ಆರ್ಥಿಕ ವರ್ಷದಲ್ಲಿ ಕಂಪನಿಯು ಶೇಕಡಾ 30ರಷ್ಟು ದೇಶಿಯ ಬಿಡಿಭಾಗ ಜೋಡಣೆ ನಿರ್ಮಿಸಲು ಯೋಜನೆ ಹೊಂದಿದೆ.
2.5 ಲೀಟರ್ ಡೀಸೆಲ್ ಎಂಜಿನ್ ಸಾಮರ್ಥ್ಯ ಹೊಂದಿರುವ ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಕಾರು 178 ಪಿಎಸ್ ಪವರ್ ಉತ್ಪಾದಿಸುವ ಕ್ಷಮತೆ ಹೊಂದಿದ್ದು, 400 ಎನ್‌ಎಂ ಟರ್ಕ್ಯೂ ಹೊಂದಿದೆ. ಅಲ್ಲದೆ 4 ವೀಲ್ ಡ್ರೈವ್ ತಂತ್ರಜ್ಞಾನಕ್ಕೆ ಹೆಸರುವಾಸಿಯಾಗಿದೆ.


Click it and Unblock the Notifications









