ಶೀಘ್ರದಲ್ಲಿ ಹೋಂಡಾ ಬ್ರಿಯೊ ಡೀಸೆಲ್ ಆಗಮನ
ಪ್ರಸಕ್ತ ವರ್ಷದ ದೀಪಾವಳಿ ಹಬ್ಬದ ವೇಳೆಗೆ ಹೋಂಡಾ ಕಂಪನಿಯು ಬ್ರಿಯೊ ಸಣ್ಣಕಾರಿನ ಡೀಸೆಲ್ ಆವೃತ್ತಿಯನ್ನು ಪರಿಚಯಿಸಲಿದೆ. ಡೀಸೆಲ್ ಕಾರು ಖರೀದಿಸಲು ಬಯಸುವ ಗ್ರಾಹಕರನ್ನು ಸುಂದರ ವಿನ್ಯಾಸದ ನೂತನ ಬ್ರಿಯೊ ಡೀಸೆಲ್ ಸೆಳೆಯುವ ನಿರೀಕ್ಷೆಯಿದೆ.
ವಿಶೇಷವೆಂದರೆ ಹೋಂಡಾ ಕಂಪನಿಯು ಇಲ್ಲಿವರೆಗೆ ಯಾವುದೇ ಡೀಸೆಲ್ ಕಾರುಗಳನ್ನು ದೇಶದ ರಸ್ತೆಗೆ ಪರಿಚಯಿಸಿಲ್ಲ. ಕಂಪನಿಯು ಇದೀಗ ಪ್ರಪ್ರಥಮ ಬಾರಿಗೆ ಬ್ರಿಯೊ ಕಾರಿಗೆ ಡೀಸೆಲ್ ಎಂಜಿನ್ ಅಳವಡಿಸಲು ಯೋಜಿಸಿದೆ. ಜೊತೆಗೆ ಇನ್ನಷ್ಟು ಡೀಸೆಲ್ ಆವೃತ್ತಿಗಳನ್ನು ಪರಿಚಯಿಸಲು ಕಂಪನಿ ಯೋಜಿಸಿದೆ.
ಇದೀಗ ಬ್ರಿಯೊ ಡೀಸೆಲ್ ಕಾರನ್ನು ಕಂಪನಿ ಟೆಸ್ಟ್ ಮಾಡಲು ಆರಂಭಿಸಿದೆ. ಇದು 1.2 ಲೀಟರಿನ ಐಡಿಟೆಕ್ ಎಂಜಿನ್ ಹೊಂದಿದೆ. ಕಂಪನಿಯು ಅರ್ಥ್ ಡ್ರೀಮ್ಸ್ ಪ್ರಾಜೆಕ್ಟ್ ಮೂಲಕ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುತ್ತಿದೆ. ಕಂಪನಿಯು 1.6 ಲೀಟರಿನ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುವ ನಿರೀಕ್ಷೆಯನ್ನೂ ಮೂಲಗಳು ವ್ಯಕ್ತಪಡಿಸಿವೆ.
ಮುಂದಿನ ವರ್ಷದ ಆರಂಭದಲ್ಲಿ ಡೀಸೆಲ್ ಕಾರುಗಳನ್ನು ಪರಿಚಯಿಸಲು ಹೋಂಡಾ ಯೋಜಿಸಿತ್ತು. ಆದರೆ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಕಂಪನಿಯು ಆದಷ್ಟು ಬೇಗ ಡೀಸೆಲ್ ಕಾರುಗಳನ್ನು ಮಾರಾಟ ಆರಂಭಿಸುವ ಒತ್ತಡಕ್ಕೆ ಕಂಪನಿ ಸಿಲುಕಿದೆ. ಯಾಕೆಂದರೆ ಕಂಪನಿಯ ಪೆಟ್ರೋಲ್ ಕಾರುಗಳ ಮಾರಾಟ ಗಮನಾರ್ಹವಾಗಿ ಇಳಿಕೆ ಕಾಣುತ್ತಿದೆ.
ನೂತನ ಹೋಂಡಾ ಬ್ರಿಯೊ ಡೀಸೆಲ್ ಕಾರು ಫೋರ್ಡ್ ಫಿಗೊ ಮತ್ತು ಷೆವರ್ಲೆ ಬೀಟ್ ಕಾರುಗಳೊಂದಿಗೆ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಲಿದೆ. ಈ ಕಾರಿನ ದರವೂ ಅತ್ಯಾಕರ್ಷಕವಾಗಿರುವ ನಿರೀಕ್ಷೆಯಿದೆ. ದರ ಸುಮಾರು 5 ಲಕ್ಷ ರು.ನಿಂದ 6.5 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.


Click it and Unblock the Notifications









