ಹ್ಯುಂಡೈ ನೂತನ ಡೀಸೆಲ್ ಐ10ಗೆ ಎಂಜಿನ್ ಅಭಿವೃದ್ಧಿ
ಹ್ಯುಂಡೈ ಮೋಟರ್ಸ್ ಇಂಡಿಯಾ ಕಂಪನಿಯು ಈ ಹಿಂದೆಯೇ ಡೀಸೆಲ್ ಎಂಜಿನ್ ಘಟಕ ನಿರ್ಮಿಸಲು ಉದ್ದೇಶಿಸಿತ್ತು. ಆದರೆ ಸರಕಾರ ಡೀಸೆಲ್ ಕಾರುಗಳಿಗೆ ಹೆಚ್ಚುವರಿ ಸುಂಕ ವಿಧಿಸುವ ಭೀತಿಯಲ್ಲಿ ಕಂಪನಿಯು ಈ ಯೋಜನೆಯನ್ನು ಮುಂದೂಡಿತ್ತು. ಆದರೆ ಸರಕಾರ ಯಾವುದೇ ಹೆಚ್ಚುವರಿ ತೆರಿಗೆ ವಿಧಿಸದ ಹಿನ್ನಲೆಯಲ್ಲಿ ಡೀಸೆಲ್ ಎಂಜಿನ್ ಉತ್ಪಾದನೆ ಆರಂಭಿಸುವ ನಿರೀಕ್ಷೆಯಿದೆ.
ಕಂಪನಿಯು ಭಾರತದಲ್ಲಿ ಎಂಜಿನ್ ಉತ್ಪಾದಿಸುವ ಘಟಕ ಹೊಂದಿಲ್ಲ. ಕಂಪನಿಯು ಐ20 ಮತ್ತು ವೆರ್ನಾ ಕಾರಿಗೆ ಎಂಜಿನುಗಳನ್ನು ಕೊರಿಯಾದಿಂದ ಆಮದುಮಾಡಿಕೊಳ್ಳುತ್ತಿದೆ. ನೂತನ ಎಂಜಿನ್ ಘಟಕದಲ್ಲಿ 1.1 ಲೀಟರ್, 1.4 ಲೀಟರ್ ಮತ್ತು 1.6 ಲೀಟರಿನ ಡೀಸೆಲ್ ಎಂಜಿನುಗಳನ್ನು ಉತ್ಪಾದಿಸಲಿದೆ.
1.1 ಲೀಟರಿನ ಡೀಸೆಲ್ ಎಂಜಿನ್ ನ್ನು ಹ್ಯುಂಡೈ ಐ10ಗೆ ಕಂಪನಿಯು ಬಳಸಲಿದೆ. ಇದು ಕಂಪನಿಯ ಬೆಸ್ಟ್ ಸೆಲ್ಲರ್ ಕಾರು. ಕಂಪನಿಯು ಡೀಸೆಲ್ ಎಂಜಿನ್ ಪರಿಚಯಿಸಿದರೆ ಸಣ್ಣಕಾರು ಮಾರಕಟ್ಟೆಯಲ್ಲಿ ಐ10 ಇನ್ನಷ್ಟು ಪಾಲುಪಡೆಯುವ ನಿರೀಕ್ಷೆಯಿದೆ.
ಸದ್ಯದ ಟ್ರೆಂಡಿನಲ್ಲಿ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಅತ್ಯಧಿಕ ದರ ಮತ್ತು ದೀರ್ಘಕಾಲದ ಬುಕ್ಕಿಂಗ್ ವಿಷಯವನ್ನು ಗ್ರಾಹಕರು ಪರಿಗಣಿಸುತ್ತಿಲ್ಲ. ಅತ್ಯಧಿಕ ಮೈಲೇಜ್ ಮತ್ತು ಕಡಿಮೆ ರನ್ನಿಂಗ್ ವೆಚ್ಚದ ಡೀಸೆಲ್ ಕಾರುಗಳಿಗೆ ಎಲ್ಲರೂ ಜೈಹೋ ಎನ್ನುತ್ತಿದ್ದಾರೆ.
ಹ್ಯುಂಡೈ ಕಂಪನಿಯು ಡೀಸೆಲ್ ಘಟಕದ ಕುರಿತು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ನೂತನ ಘಟಕ ಚೆನ್ನೈನಲ್ಲಿ ನಿರ್ಮಾಣವಾಗುವ ನಿರೀಕ್ಷೆಯನ್ನು ವರದಿಗಳು ವ್ಯಕ್ತಪಡಿಸಿವೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









