ಜಾಗ್ವಾರ್ ಎಕ್ಸ್ ಜೆಆರ್: ಒಲವಿನ ದೊರೆಗೆ ಪ್ರೇಮದ ಉಡುಗೊರೆ
ಪೊಲೀಸ್ ಸ್ಟೇಷನ್, ಕೋರ್ಟ್ ಮತ್ತು ಸಾರ್ವಜನಿಕರಿಂದ ದರ್ಶನ್ ಗೆ ತಕ್ಕ "ಶಾಸ್ತ್ರಿ"ಯೂ ಆಗಿತ್ತು. "ನವಗ್ರಹ" ದಲ್ಲಿ ಏರುಪೇರು ಸಂಸಾರ ಬಿಕ್ಕಟ್ಟಿಗೆ ಕಾರಣವೆಂದು ಜ್ಯೋತಿಷಿಗಳು ಬೊಗಳೆ ಬಿಟ್ಟರು. ಬೇರೊಬ್ಬ ನಟಿ ಜೊತೆ "ಸ್ನೇಹನಾ ಪ್ರೀತಿನಾ" ಎಂದು ಕೆದಕಲು ಕೆಲವರು ಪ್ರಯತ್ನಿಸಿದರು.
"ಈ ಬಂಧನ" ಬಿಡಲಾಗದೆ " ಸ್ವಾಮಿ"ಯಿಂದ ಪೆಟ್ಟುತಿಂದ ಪತ್ನಿ "ಧರ್ಮ" ಕಾರಣದಿಂದ ಸಂಸಾರ ಸಾಗಿಸಲು ಮುಂದಾದರು. ನಿಧಾನವಾಗಿ "ಬಾಸ್" ಮಾಡಿದ ತಪ್ಪನ್ನು ಎಲ್ಲರೂ ಮರೆಯತೊಡಗಿದರು. ಇದೀಗ ಹೃದಯದ "ಪ್ರಿನ್ಸ್", ಒಲವಿನ "ಸಾರಥಿ" "ಲವ್ಲಿ ಕಿಂಗ್ ಗೆ" ವಿಜಯಲಕ್ಷ್ಮಿ ಹುಟ್ಟುಹಬ್ಬದ ಉಡುಗೊರೆ ನೀಡಿ ಪ್ರೀತಿಯಿಂದ "ಬುಲ್ ಬುಲ್" ಎಂದಿದ್ದಾರೆ.
ಪತಿಗೆ ಪತ್ನಿ, ಪತ್ನಿಗೆ ಪತಿ ಹುಟ್ಟುಹಬ್ಬದ ಉಡುಗೊರೆ ನೀಡುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಆದರೆ ವಿಜಯಲಕ್ಷ್ಮಿ ನೀಡಿದ್ದು 1.38 ಕೋಟಿ ರುಪಾಯಿನ ನೀಲಿ ಬಣ್ಣದ ಜಾಗ್ವಾರ್ ಎಕ್ಸ್ ಜೆಆರ್ ಕಾರು. ಹೀಗಾಗಿ ಈ ಉಡುಗೊರೆ ಸುದ್ದಿಯನ್ನು ಕನ್ನಡ ಡ್ರೈವ್ ಸ್ಪಾರ್ಕ್ ಪ್ರೀತಿಯಿಂದ ಹೆಕ್ಕಿಕೊಂಡು ಸುದ್ದಿ ಮಾಡಿತ್ತು. ಆದರೆ ಆ ಕಾರಿನ ಕುರಿತು ಹೆಚ್ಚಿನ ಮಾಹಿತಿ ನೀಡಲು ಆ ಸುದ್ದಿಯಲ್ಲಿ ಅವಕಾಶವಾಗಿರಲಿಲ್ಲ.
ಜಾಗ್ವಾರ್ ಎಕ್ಸ್ ಜೆಆರ್ ಫಸ್ಟ್ ಲುಕ್: ಸೂಪರ್ ಸ್ಪೋರ್ಟ್ಸ್ ಕಾರುಗಳಿಗೆ ಸಮರ್ಥ ವ್ಯಾಖ್ಯಾನವೆಂದಿದ್ದರೆ ಅದು ಜಾಗ್ವಾರ್ ಎಕ್ಸ್ ಜೆ ಆರ್. ಅದರ ಅದ್ಧೂರಿ ಸೌಂದರ್ಯ ಮತ್ತು ಕಾರ್ಯಕ್ಷಮತೆ ಮತ್ತು ರಸ್ತೆಯಲ್ಲಿ ಅದರ ದುರಾಕ್ರಮಣದ ವರ್ತನೆ ಸ್ಪೋರ್ಟ್ ಕಾರು ಪ್ರೇಮಿಗಳಿಗೆ ಇಷ್ಟವಾಗುವ ವಿಚಾರಗಳು.
ಇದು ನಾಲ್ಕು ಬಾಗಿಲಿನ ಸುಸಜ್ಜಿತ ಕೂಪ್ ಕಾರು. ಪ್ರಥಮ ದರ್ಜೆಯ ಚರ್ಮದ ಮೆತ್ತನೆಯ ಹಾಸುಗಳನ್ನು ಇದರ ಸೀಟು ಮತ್ತು ಇಂಟಿರಿಯರ್ ವಿನ್ಯಾಸಕ್ಕೆ ಬಳಸಲಾಗಿದೆ. ಈ ಕಾರಲ್ಲಿ ಅತ್ಯುನ್ನತ ದರ್ಜೆಯ ಗ್ಯಾಡ್ಜೆಟ್ ಸಾಧನಗಳನ್ನು ಅಳವಡಿಸಲಾಗಿದೆ. ಇದರಲ್ಲಿ 12.3 ಇಂಚಿನ ಗ್ಲಾಸ್ ಸ್ಕ್ರೀನ್ ಇದ್ದು, ಹೈಡೆಫಿನೆಷನ್ ಟಚ್ ಸ್ಕ್ರೀನ್ ಮೂಲಕ ಟೆಲಿಫೋನ್, ಆಡಿಯೋ ಸಿಸ್ಟಮ್ ಮತ್ತಿತರ ಮನರಂಜನೆ ಸಾಧನಗಳನ್ನು ಅಪರೇಟ್ ಮಾಡಬಹುದಾಗಿದೆ.
ಈ ಕಾರನ್ನು ಸುರಕ್ಷತೆಯ ದೃಷ್ಟಿಯಿಂದ ಯಾವುದೇ ರಾಜಿಯಿಲ್ಲದಂತೆ ರೂಪಿಸಲಾಗಿದೆ. ಏರ್ ಬ್ಯಾಗ್, ಸೇಫ್ ಸೀಟುಗಳು, ಪಾದಚಾರಿಗಳನ್ನು ಗುರುತಿಸುವ ಸೆನ್ಸಾರ್, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಕ್ರೂಷ್ ಕಂಟ್ರೋಲ್, ಪಾರ್ಕಿಂಗ್ ಸೆನ್ಸಾರ್, ಅಡ್ವಾನ್ಸಡ್ ಬ್ರೇಕಿಂಗ್ ಸಿಸ್ಟಮ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸೇರಿದಂತೆ ಹಲವು ಫೀಚರುಗಳಿವೆ.
ಈ ಕಾರು 4,200 ಸಿಸಿಯ, ವಿ8 ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 400 ಹಾರ್ಸ್ ಪವರ್ ಮತ್ತು 560 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ದರ್ಶನ್ ಉಡುಗೊರೆಯಾಗಿ ಪಡೆದ ಕಾರಿನ ದರ ಸುಮಾರು 1.38 ಕೋಟಿ ರುಪಾಯಿಯಂತೆ. (ದರ್ಶನ್ ಬಳಿ ಇನ್ಯಾವ ಕಾರುಗಳಿವೆ ಗೊತ್ತೆ? )


Click it and Unblock the Notifications









