ಮಹೀಂದ್ರ ಎಕ್ಸ್‌ಯುವಿ500 ಬುಕ್ಕಿಂಗ್ ಜೂನ್ 8ರಿಂದ ಪುನಾರಂಭ
ಮಹೀಂದ್ರ ಆಂಡ್ ಮಹೀಂದ್ರ ಕೆಲವು ತಿಂಗಳ ಹಿಂದೆ ನಡೆಸಿದ್ದ ಎರಡನೇ ಹಂತದ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ 25 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರು. ಆದರೆ ಅದರಲ್ಲಿ ಕಂಪನಿಯು ಕೇವಲ 7,200 ಗ್ರಾಹಕರಿಗೆ ಮಾತ್ರ ಲಕ್ಕಿ ಡ್ರಾ ಮೂಲಕ ಬುಕ್ಕಿಂಗ್ ಮಾಡುವ ಅವಕಾಶವನ್ನೂ ಕಂಪನಿ ನೀಡಿತ್ತು.
"ಮಹೀಂದ್ರ ಎಕ್ಸ್‌ಯುವಿ500ಗೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾವೀಗ ಈ ಹಿಂದೆ ಎಕ್ಸ್‌ಯುವಿ500 ಬಿಡುಗಡೆ ಮಾಡಿದ ನಗರಗಳಲ್ಲಿ ಮಾತ್ರವಲ್ಲದೇ ಕೆಲವು ಹೊಸ ನಗರಗಳಲ್ಲಿಯೂ ಎಕ್ಸ್‌ಯುವಿ ಬುಕ್ಕಿಂಗ್ ಪುನರ್ ಆರಂಭಿಸಲಿದ್ದೇವೆ. ದೇಶದ ಎಲ್ಲಾ ಕಡೆಗಳಲ್ಲೂ ಇರುವ ಬೇಡಿಕೆಯನ್ನೂ ನಿಭಾಯಿಸಲು ನಾವು ಶಕ್ತರಾಗುತ್ತೇವೆ ಎನ್ನುವ ನಂಬಿಕೆ ನಮಗಿದೆ" ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪವನ್ ಶಾ ಹೇಳಿದ್ದಾರೆ.
ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಶೀಘ್ರದಲ್ಲಿ XUV500 ಉತ್ಪಾದನೆಯನ್ನು ಹೆಚ್ಚಿಸಲು ಸಹ ಯೋಜಿಸಿದೆ. ಕಂಪನಿಯು ಈಗ ಪ್ರತಿ ತಿಂಗಳಿಗೆ 3 ಸಾವಿರ ಎಕ್ಸ್ಯುವಿ ಉತ್ಪಾದಿಸುತ್ತಿದ್ದು, ಇದನ್ನು 5 ಸಾವಿರ ಯುನಿಟಿಗೆ ಹೆಚ್ಚಿಸುವ ಯೋಜನೆಯನ್ನು ಹಾಕಿಕೊಂಡಿದೆ.
ಮಹೀಂದ್ರ ಎಕ್ಸ್‌ಯುವಿ500 ಎಕ್ಸ್‌ಯುವಿಯನ್ನು ಜಾಗತಿಕ ಮಾರುಕಟ್ಟೆಗೂ ಪರಿಚಯಿಸುವ ಯೋಜನೆ ಕಂಪನಿಗಿದೆ. ದೇಶದ ಗ್ರಾಹಕರ ಬೇಡಿಕೆಗೆ ತಕ್ಕಂತೆ ಪೂರೈಸಲು ಸಾಧ್ಯವಾದ ನಂತರ ಮಹೀಂದ್ರ ಎಕ್ಸ್‌ಯುವಿ500 ಆಸ್ಟ್ರೇಲಿಯಾ, ಚಿಲ್ಲಿ, ಇಟಲಿ ದೇಶಗಳಿಗೆ ಪ್ರಯಾಣ ಬೆಳೆಸಲಿದೆ.
ಮಹೀಂದ್ರ ಎಕ್ಸ್‌ಯುವಿ500 ಎಕ್ಸ್‌ಯುವಿ ಖರೀದಿಸಲು ಬಯಸುವರು ಜೂನ್ 8ರಿಂದ ಮಹೀಂದ್ರ ಶೋರೂಂ ಕಡೆಗೆ ಪ್ರಯಾಣ ಬೆಳೆಸಬಹುದು. ಸದ್ಯ ಕಂಪನಿಯು ಬುಕ್ಕಿಂಗ್ ದಿನಾಂಕಕ್ಕೆ ಮಿತಿಯನ್ನು ಪ್ರಕಟಿಸಿಲ್ಲ. ಗ್ರಾಹಕರ ಬೇಡಿಕೆ ಮಿತಿ ದಾಟಿದಾಗ ಕಂಪನಿಯು ಬುಕ್ಕಿಂಗ್ ನಿಲ್ಲಿಸುವ ನಿರೀಕ್ಷೆಯಿದೆ.


Click it and Unblock the Notifications









