ಜರೂರಾಗಿ ರಸ್ತೆಗಿಳಿಯಲಿದೆ ನೂತನ ಮಾರುತಿ ಡಿಜೈರ್

ಇತ್ತೀಚೆಗೆ ದೆಹಲಿಯಲ್ಲಿ ವಾಹನ ಜಾತ್ರೆ ನಡೆಯಿತ್ತಲ್ವ. ಅಲ್ಲಿ ಮಾರುತಿ ಸ್ಟಾಲ್ ನಲ್ಲಿ ಒಂದು ಕಾರು ಮಿಸ್ಸ್ ಆಗಿತ್ತು. ನೂತನ ಸ್ವಿಫ್ಟ್ ಡಿಜೈರ್ ಕಾರು ವಾಹನ ಪ್ರದರ್ಶನದಲ್ಲಿರಲಿಲ್ಲ. ಈ ಕುರಿತು ಡ್ರೈವ್ ಸ್ಪಾರ್ಕ್ ಪ್ರತಿನಿಧಿಗಳು ಕಂಪನಿಯ ಮುಖ್ಯ ಅಧಿಕಾರಿಗಳನ್ನು ಪ್ರಶ್ನಿಸಿದ್ದರು.
"ಇಲ್ಲಿ ಲೆಕ್ಕವಿಲ್ಲದಷ್ಟು ನೂತನ ಕಾರುಗಳು ಬಿಡುಗಡೆಯಾಗುತ್ತಿವೆ. ನೂತನ ಸ್ವಿಫ್ಟ್ ಡಿಜೈರ್ ಕಾರಿಗೆ ವಿಶೇಷ ಬಿಡುಗಡೆ ಕಾರ್ಯಕ್ರಮದ ಅಗತ್ಯವಿದೆ" ಎಂದು ಆ ಅಧಿಕಾರಿ ಹೇಳಿದ್ದರು.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ನೂತನ ಸ್ವಿಫ್ಟ್ ಕಾರು ರಸ್ತೆಗಿಳಿದಿತ್ತು. ನಂತರ ಶೀಘ್ರದಲ್ಲಿ ಸ್ವಿಫ್ಟ್ ಡಿಜೈರ್ ಸೆಡಾನ್ ಕಾರು ರಸ್ತೆಗಿಳಿಯಬೇಕಿತ್ತು. ಆದರೆ ಮಾರುತಿ ಸುಜುಕಿ ಮಾನೆಸರ್ ಘಟಕದಲ್ಲಿನ ನೌಕರರ ಪ್ರತಿಭಟನೆ ಕಾರು ಉತ್ಪಾದನೆಗೆ ಹಿನ್ನಡೆಯುಂಟುಮಾಡಿತ್ತು. ಇದು ನೂತನ ಡಿಜೈರ್ ರಸ್ತೆಗಿಳಿಯುವುದನ್ನು ವಿಳಂಬವಾಗಿಸಿತ್ತು.
ನೂತನ ಸ್ವಿಫ್ಟ್ ಡಿಜೈರ್ ಕಾರಿಗೆ ನೂತನ ಸ್ವಿಫ್ಟ್ ಪ್ಲಾಟ್ ಫಾರ್ಮನ್ನೇ ಬಳಸಿಕೊಳ್ಳಲಾಗಿದೆಯಂತೆ. ಈ ಕಾರು ನಾಲ್ಕು ಮೀಟರ್ ಕಡಿಮೆ ಉದ್ದದ ಕೆಟಗರಿಯಲ್ಲಿ ರಸ್ತೆಗಿಳಿಯಲಿದೆ. ಇದರ ಉದ್ದ 3.99 ಮೀಟರ್. ಇದು ಅಬಕಾರಿ ಸುಂಕ ಕಡಿಮೆ ಮಾಡಿಕೊಳ್ಳಲು ಕಾರು ಕಂಪನಿಗಳು ಮಾಡುವ ಉಪಾಯ. ನಾಲ್ಕು ಮೀಟರುಗಳಿಗಿಂತ ಹೆಚ್ಚು ಉದ್ದವಾದ ಕಾರಿಗೆ ಹೆಚ್ಚು ಸುಂಕ ಪಾವತಿಸಬೇಕು.
ಈಗ ರಸ್ತೆಯಲ್ಲಿರುವ ಸ್ವಿಫ್ಟ್ ಡಿಜೈರ್ ಕಾರು ಮಾರುತಿ ಸುಜುಕಿ ಕಂಪನಿಯ ಯಶಸ್ವಿ ಸೆಡಾನ್ ಕಾರಾಗಿದೆ. ಈ ಕಾರು ರಸ್ತೆಗಿಳಿದ ನಂತರ ಸುಮಾರು 3.2 ಲಕ್ಷ ಯುನಿಟ್ ಮಾರಾಟವಾಗಿದೆ.
ನೂತನ ಸ್ವಿಫ್ಟ್ ಡಿಜೈರ್ ಕಾರಿನ ದರ ಹಳೆಯ ಆವೃತ್ತಿಗಿಂತ ಕಡಿಮೆ ಇರಲಿದೆಯಂತೆ. ಆದರೆ ಈ ಕುರಿತು ಸ್ಪಷ್ಟ ಮಾಹಿತಿಯಿಲ್ಲ. ನೂತನ ಡಿಜೈರ್ ಕಾರಿಗಾಗಿ ಕಂಪನಿ ಮತ್ತು ಬಿಡಿಭಾಗ ಪೂರೈಕೆದಾರರು ಸುಮಾರು 230 ಕೋಟಿ ರು. ಹೂಡಿಕೆ ಮಾಡಿದ್ದಾರೆ.


Click it and Unblock the Notifications








