ಶೀಘ್ರದಲ್ಲಿ ಮಾರುತಿ 800 ಬದಲಿ ಆವೃತ್ತಿ ರಸ್ತೆಗೆ
ಹಳೆಯ ಮಾರುತಿ 800 ಕಾರು ಪ್ರೇಮಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಮಾರುತಿ 800 ಬದಲಿ ಆವೃತ್ತಿಯೊಂದನ್ನು ಮಾರುತಿ ಸುಜುಕಿ ಶೀಘ್ರದಲ್ಲಿ ದೇಶದ ರಸ್ತೆಗೆ ಪರಿಚಯಿಸಲಿದೆ. ಕಂಪನಿಯು ಈಗಾಗಲೇ ಇದರ ಅಭಿವೃದ್ಧಿ ಕಾರ್ಯವನ್ನು ಆರಂಭಿಸಿದ್ದು, ದೀಪಾವಳಿ ವೇಳೆಗೆ ರಸ್ತೆಗಿಳಿಯುವ ನಿರೀಕ್ಷೆಯಿದೆ.
ನಗರಗಳಲ್ಲಿ 800 ಕಾರಿನ ಮಾರಾಟವನ್ನು ಮಾರುತಿ ಈಗಾಗಲೇ ಸ್ಥಗಿತಗೊಳಿಸಿದೆ. ಆಲ್ಟೋ ಬೇಡಿಕೆ ತುಸು ಕಡಿಮೆಯಾಗಿರುವುದರಿಂದ ನೂತನ 800 ಸಿಸಿ ಕಾರೊಂದರ ಮೂಲಕ ಪಾಲು ಹೆಚ್ಚಿಸಿಕೊಳ್ಳುವ ಯೋಜನೆಯನ್ನು ಕಂಪನಿ ಹೊಂದಿದೆ.
ಮಾರುತಿ ಸುಜುಕಿ ಕಂಪನಿಯು 800ಸಿಸಿ ಕಾರನ್ನು ಗುರ್ ಗಾಂವ್ ಘಟಕದಲ್ಲಿ ಅಭಿವೃದ್ಧಿಪಡಿಸುತ್ತಿದೆ. ಕಂಪನಿಯು ಈಗಾಗಲೇ ಟ್ರಯಲ್ 800ಸಿಸಿ ಆವೃತ್ತಿಯನ್ನು ರಸ್ತೆಯಲ್ಲಿ ಪರೀಕ್ಷಿಸುತ್ತಿದೆ ಎಂದು ವರದಿಗಳು ಹೇಳಿವೆ. ಒಂದು ವರದಿಯ ಪ್ರಕಾರ ನೂತನ ಕಾರಿನ ಹೆಸರು ಆಲ್ಟೊ 800 ಎಂದಿರಲಿದೆಯಂತೆ.
ಕೆಲವು ವಾಹನ ವೆಬ್ ತಾಣಗಳು ಆಲ್ಟೊ 800 ಕಾರಿನ ಸ್ಪೈ ಚಿತ್ರಗಳನ್ನು ಪ್ರಕಟಿಸಿವೆ. ನೂತನ 800ಸಿಸಿ ಕಾರು ನೋಡಲು ಆಲ್ಟೊ ಮತ್ತು ಎಸ್ಟಾರ್ ಮಿಶ್ರಣದಂತೆ ಇದೆ. ಇದು ಕಂಪನಿಯ ಅಗ್ಗದ ಕಾರಾಗಿರುವ ನಿರೀಕ್ಷೆಯಿದೆ. ವಿನ್ಯಾಸವೆಲ್ಲ ಆಲ್ಟೋ ಫ್ಲಾಟ್ ಫಾರ್ಮಿನಲ್ಲೇ ಇರಲಿದೆ ಎಂದು ವರದಿಗಳು ಹೇಳಿವೆ.
ಆದರೆ ಮಾರುತಿ 800 ಸಿಸಿ ಹೊಸ ಕಾರಿನ ಎಂಜಿನನ್ನು ಸಂಪೂರ್ಣವಾಗಿ ಹೊಸದಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಹೆಚ್ಚು ಮೈಲೇಜ್ ನೀಡುವ ಎಂಜಿನ್ ಎಂದು ಮೂಲಗಳು ಹೇಳಿವೆ. ಇದರ ದರ ಕೂಡ ಆಲ್ಟೊಗಿಂತ ಕಡಿಮೆ ಇರಲಿದೆಯಂತೆ. ಯಾವುದಕ್ಕೂ ದೀಪಾವಳಿವರೆಗೆ ಕಾಯೋಣ.


Click it and Unblock the Notifications









