ಹೊಸ ಮಾರುತಿ ಆಲ್ಟೊ 800 ಆಗಮನ ಸನಿಹ?
ಮಾನೆಸರ್ ಘಟಕಕ್ಕೆ ಬೀಗಮುದ್ರೆ ಹಾಕಿರುವುದರಿಂದ ಮಾರುತಿ ಸುಜುಕಿ ಮಾರಾಟ ಭಾರಿ ಇಳಿಕೆ ದಾಖಲಿಸಿದೆ. ಇದೀಗ ಕಂಪನಿಯು ನೂತನ ಆಲ್ಟೊ 800 ಕಾರನ್ನು ಪರಿಚಯಿಸುವ ಮೂಲಕ ಮಾರಾಟ ಹೆಚ್ಚಿಸಿಕೊಳ್ಳುವ ಯೋಜನೆಯಲ್ಲಿದೆ. ಕಂಪನಿಯು ಮಾರುತಿ 800 ಬದಲಿ ಆವೃತ್ತಿ ಆಲ್ಟೊ 800 ಕಾರನ್ನು ಗುರ್ ಗಾಂವ್ ಘಟಕದಲ್ಲಿ ಉತ್ಪಾದಿಸಲಿದೆ.
ನೂತನ ಆಲ್ಟೊ 800 ಕಾರಿನ ದರ ಸುಮಾರು 2 ಲಕ್ಷ ರುಪಾಯಿ ಆಸುಪಾಸಿನಲ್ಲಿರಲಿದೆ. ಇದು ಹ್ಯುಂಡೈ ಇಯಾನ್ ಮತ್ತು ಟಾಟಾ ನ್ಯಾನೊ ಕಾರುಗಳಿಗೆ ಪ್ರಬಲ ಪ್ರತಿಸ್ಪರ್ಧೆ ನೀಡುವ ನಿರೀಕ್ಷೆಯಿದೆ.
ನೂತನ ಆಲ್ಟೊ 800 ಕಾರು ಪರಿಚಯಿಸಲು ಕಂಪನಿಯು ಹೆಚ್ಚು ವಿಳಂಬ ಮಾಡಲು ಇಚ್ಚಿಸುವುದಿಲ್ಲವೆಂದು ಕಂಪನಿ ಮೂಲಗಳು ತಿಳಿಸಿವೆ. ಮಾನೆಸರ್ ಘಟಕಕ್ಕೆ ಬೀಗ ಮುದ್ರೆ ಹಾಕಿರುವುದರಿಂದ ಕಂಪನಿಗೆ ಸುಮಾರು 2 ಸಾವಿರ ಕೋಟಿ ರು. ನಷ್ಟವಾಗಿದೆ ಎಂದು ಎಕಾನಮಿಕ್ ಟೈಮ್ಸ್ ವರದಿ ಹೇಳಿದೆ.
ನಗರಗಳಲ್ಲಿ 800 ಕಾರಿನ ಮಾರಾಟವನ್ನು ಮಾರುತಿ ಈಗಾಗಲೇ ಸ್ಥಗಿತಗೊಳಿಸಿದೆ. ಆಲ್ಟೋ ಬೇಡಿಕೆ ತುಸು ಕಡಿಮೆಯಾಗಿರುವುದರಿಂದ ನೂತನ 800 ಸಿಸಿ ಕಾರೊಂದರ ಮೂಲಕ ಪಾಲು ಹೆಚ್ಚಿಸಿಕೊಳ್ಳುವ ಯೋಜನೆಯನ್ನು ಕಂಪನಿ ಹೊಂದಿದೆ.
ಮಾರುತಿ 800 ಸಿಸಿ ಹೊಸ ಕಾರಿನ ಎಂಜಿನನ್ನು ಸಂಪೂರ್ಣವಾಗಿ ಹೊಸದಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಹೆಚ್ಚು ಮೈಲೇಜ್ ನೀಡುವ ಎಂಜಿನ್ ಎಂದು ಮೂಲಗಳು ಹೇಳಿವೆ. ಇದರ ದರ ಕೂಡ ಆಲ್ಟೊಗಿಂತ ಕಡಿಮೆ ಇರಲಿದೆಯಂತೆ.


Click it and Unblock the Notifications









