ರಸ್ತೆ ತೆರಿಗೆಯ ದುಡ್ಡು ರಸ್ತೆ ಅಭಿವೃದ್ಧಿಗಂತೆ, ನಂಬ್ತಿರಾ?
ಆಮದು ಮಾಡಿಕೊಂಡ ಕಾರುಗಳಿಗೆ ಮಾತ್ರ ಈ ರಸ್ತೆ ತೆರಿಗೆ ಅನ್ವಯವಾಗಲಿದೆ ಎಂಬರ್ಥದ ಚರ್ಚೆಗಳನ್ನು ಕೆಲವು ಟಿವಿ ಚಾನೆಲುಗಳು ನಡೆಸಿವೆ. ಎಲ್ಲಾ ಐಷಾರಾಮಿ ಕಾರುಗಳಿಗೂ ಈ ತೆರಿಗೆ ಹೆಚ್ಚಳ ಅನ್ವಯಿಸುತ್ತದೆ ಎಂದು ಇನ್ನು ಕೆಲವು ಸುದ್ದಿ ಚಾನೆಲ್ ಗಳು ಪ್ರತಿಪಾದಿಸಿವೆ. ಈ ಕುರಿತು ಇಲ್ಲಿವರೆಗೆ ಸರಕಾರದ ಕಡೆಯಿಂದ ಯಾವುದೇ ಸ್ಪಷ್ಟತೆ, ಖಚಿತತೆ ದೊರಕಿಲ್ಲ.
ಐಷಾರಾಮಿ ಕಾರುಗಳಿಗೆ ತೆರಿಗೆ ವಿಧಿಸುವುದರಿಂದ ಜನಸಾಮಾನ್ಯರಿಗೆ ಒಳ್ಳೆಯದಾಗಲಿದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ಇದರಿಂದ ದೇಶದ ಐಷಾರಾಮಿ ಕಾರು ಆಮದು ವಹಿವಾಟು ಕುಂಠಿತವಾಗಲಿದೆ. ಇದರಿಂದ ದೇಶದ ಆದಾಯಕ್ಕೆ ಕೊಂಚ ಖೋತಾ ಆಗುವ ಸಾಧ್ಯತೆಯಿದೆ.
ಲಗ್ಷುರಿ ಕಾರುಗಳಿಗೆ ತೆರಿಗೆ ವಿಧಿಸುವ ದಿನಾಂಕ ಇನ್ನೂ ಸ್ಪಷ್ಟವಾಗಿಲ್ಲ. ಬಹುಶಃ ಈ ಯೋಜನೆಯನ್ನು ಸರಕಾರವು ಮುಂದಿನ ವರ್ಷದಿಂದ ಕಾರ್ಯರೂಪಕ್ಕೆ ತರುವ ನಿರೀಕ್ಷೆಯಿದೆ. ಐಷಾರಾಮಿ ಕಾರುಗಳಿಗೆ ರಸ್ತೆ ತೆರಿಗೆಯು ಶೇಕಡ 2ರಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ.
ರಸ್ತೆ ತೆರಿಗೆ ಹೆಚ್ಚಿಸುವ ಸರಕಾರದ ಕ್ರಮಕ್ಕೆ ಕೆಲವು ಐಷಾರಾಮಿ ಕಾರು ಕಂಪನಿಗಳು ವಿರೋಧ ವ್ಯಕ್ತಪಡಿಸಿವೆ. ಜೊತೆಗೆ ಸರಕಾರ ಈ ರೀತಿ ಮಾಡಲಿಕ್ಕಿಲ್ಲವೆಂಬ ಆಶಯವನ್ನೂ ವ್ಯಕ್ತಪಡಿಸಿವೆ. ತೆರಿಗೆ ಹೆಚ್ಚಿಸಿದರೆ ಐಷಾರಾಮಿ ಕಾರುಗಳ ಆಮದು ಕಡಿಮೆಯಾಗುತ್ತದೆ ಮತ್ತು ಇದರಿಂದ ಸರಕಾರಕ್ಕೆ ಹೆಚ್ಚಿನ ನಷ್ಟವಾಗಲಿದೆ ಎಂಬ ಅಭಿಪ್ರಾಯ ಈ ಕಂಪನಿಗಳದ್ದು.
ಐಷಾರಾಮಿ ಕಾರುಗಳಿಗೆ ತೆರಿಗೆ ವಿಧಿಸುವುದು ಸರಕಾರಕ್ಕೆ ಹೆಚ್ಚು ಆದಾಯ ತಂದುಕೊಡಲಿದೆ ಎಂದು ಇತ್ತೀಚೆಗೆ ಸರಕಾರ ತಿಳಿಸಿತ್ತು. ಈ ಹಣವನ್ನು ಬಳಸಿ ದೇಶದ ರಸ್ತೆಗಳನ್ನು ಸುಧಾರಣೆ ಮಾಡುವ ಇಂಗಿತವನ್ನೂ ಸರಕಾರ ವ್ಯಕ್ತಪಡಿಸಿದೆ. ಆದರೆ ಜನಸಾಮಾನ್ಯರ ಪ್ರಶ್ನೆ ಏನೆಂದರೆ, ಸರಕಾರ ನಿಜಕ್ಕೂ ಈ ತೆರಿಗೆ ಹಣವನ್ನು ರಸ್ತೆ ಅಭಿವೃದ್ಧಿಗೆ ಬಳಸುವುದೇ? ಅಥವಾ ಸ್ವಹಿತಾಶಕ್ತಿಗಳ ಅಭಿವೃದ್ಧಿಗೆ ಬಳಸುವುದೇ? ಎನ್ನುವುದಾಗಿದೆ.


Click it and Unblock the Notifications









