ಬೆಂಗ್ಳೂರು ಟೊಯೊಟಾ ಘಟಕದಲ್ಲಿ ಶೀಘ್ರದಲ್ಲಿ ಎಂಜಿನ್
ಜಪಾನಿನ ವಾಹನ ತಯಾರಿಕಾ ಕಂಪನಿ ಟೊಯೊಟಾ ಮೋಟರ್ಸ್, ಬೆಂಗಳೂರು ಘಟಕದಲ್ಲಿ ಶೀಘ್ರದಲ್ಲಿ ಎಂಜಿನ್ ಉತ್ಪಾದನೆ ಆರಂಭಿಸಲಿದೆ. "ಆಗಸ್ಟ್ ತಿಂಗಳಿನಲ್ಲಿಯೇ ಎಂಜಿನ್ ಉತ್ಪಾದನೆ ಆರಂಭಿಸಲಿದ್ದೇವೆ" ಎಂದು ಟೊಯೊಟಾ ಕಿರ್ಲೊಸ್ಕರ್ ಮೋಟರ್ಸ್ ಕಂಪನಿಯ ಸಹಾಯಕ ವ್ಯವಸ್ಥಾಪಕ ನಿರ್ದೇಶಕರಾದ ಶೇಖರ್ ವಿಶ್ವನಾಥನ್ ಹೇಳಿದ್ದಾರೆ.
ಕಂಪನಿಯು ಬೆಂಗಳೂರು ಘಟಕದಲ್ಲಿ ವರ್ಷಕ್ಕೆ ಒಂದು ಲಕ್ಷ ಕಾರು ಎಂಜಿನ್ ಮತ್ತು 2.40 ಲಕ್ಷ ಗೇರ್ ಬಾಕ್ಸ್ ಉತ್ಪಾದಿಸುವ ಯೋಜನೆ ಹೊಂದಿದೆ ಎಂದು ಅವರು ಹೇಳಿದ್ದಾರೆ. ಅವರು ಅಸೋಚಾಮ್ ಆಯೋಜಿಸಿದ್ದ ಚೆನ್ನೈ ಬೆಂಗಳೂರು ಕೈಗಾರಿಕಾ ಕಾರಿಡರ್ ಸಮಾವೇಶದಲ್ಲಿ ಆಗಮಿಸಲು ಬಂದಾಗ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದಾರೆ.
ನೂತನ ಎಟಿಯೋಸ್ ಸೆಡಾನ್ ಮತ್ತು ಹ್ಯಾಚ್ ಬ್ಯಾಕ್ ಲಿವಾ ಆವೃತ್ತಿಗಳಿಗಾಗಿ ಬೆಂಗಳೂರಿನಲ್ಲಿ ಎಂಜಿನ್ ಮತ್ತು ಟ್ರಾನ್ಷ್ ಮಿಷನ್ ಉತ್ಪಾದನಾ ಘಟಕ ನಿರ್ಮಿಸುವುದಾಗಿ ಕಳೆದ ವರ್ಷವೇ ಕಂಪನಿ ಪ್ರಕಟಿಸಿತ್ತು. ಇದಕ್ಕಾಗಿ ಸುಮಾರು 500 ಕೋಟಿ ರುಪಾಯಿ ವಿನಿಯೋಗಿಸುವುದಾಗಿ ಹೇಳಿತ್ತು.
ಈಗಾಗಲೇ ಸುಮಾರು 1,500 ಎಟಿಯೋಸ್ ಮತ್ತು ಲಿವಾ ಕಾರುಗಳನ್ನು ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.


Click it and Unblock the Notifications









