ಆಗಸ್ಟ್ 24: ಹೊಸ ಟೊಯೊಟಾ ಕ್ಯಾಮ್ರಿ ಆಗಮನಕ್ಕೆ ಮಹೂರ್ತ
ಹೊಸ ಕ್ಯಾಮ್ರಿ ಆಗಮನದ ನಂತರ ಈ ವರ್ಷ ಹೊಸ ಇನ್ನೋವಾ ಆವೃತ್ತಿ ಮತ್ತು ಫಾರ್ಚ್ಯುನರ್ ಕಾರುಗಳು ಆಗಮಿಸಲಿವೆ. ಕಂಪನಿಯು ನೂತನ ಕ್ಯಾಮ್ರಿಯನ್ನು ಬೆಂಗಳೂರಿನ ಬಿಡದಿ ಘಟಕದಲ್ಲಿ ಜೋಡಿಸಲಿದೆ. ನೂತನ ಕ್ಯಾಮ್ರಿ ದರವೂ ಪ್ರತಿಸ್ಪರ್ಧಿ ಕಾರುಗಳ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.
2012 Toyota Camry ಟೊಯೊಟಾ ಕಂಪನಿಯ ಮೂರನೇ ಸೆಡಾನ್ ಆವೃತ್ತಿಯಾಗಲಿದೆ. ಇದು ಕಂಪನಿಯು ದೇಶದಲ್ಲಿ ಅಸೆಂಬಲ್(ಜೋಡನೆ) ಮಾಡುವ ಮೊದಲ ಸೆಡಾನ್ ಕಾರಾಗಿದೆ. ಕಂಪನಿಯು ಸಿಕೆಡಿ ಹಾದಿ ಮೂಲಕ ಆಮದು ಮಾಡಿ, ಬೆಂಗಳೂರು ಘಟಕದಲ್ಲಿ ಕ್ಯಾಮ್ರಿ ಕಾರನ್ನು ಜೋಡಿಸಲಿದೆ.
ನೂತನ ಟೊಯೊಟಾ ಕ್ಯಾಮ್ರಿ ಕಾರು ಹೋಂಡಾ ಅಕಾರ್ಡ್ ಮತ್ತು ಸ್ಕೋಡಾ ಸೂಪರ್ಬ್ ಕಾರುಗಳಿಗೆ ಪೈಪೋಟಿ ನೀಡಲಿದೆ. 2012ರ ಟೊಯೊಟಾ ಕ್ಯಾಮ್ರಿ ಕೇವಲ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಆಗಮಿಸಲಿದೆ. ಇದು ಒಂದು ಕೊರತೆಯೂ ಹೌದು.
ಹೋಂಡಾ ಅಕಾರ್ಡ್ ಕೂಡ ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಆದರೆ ಸ್ಕೋಡಾ ಸೂಪರ್ಬ್ ಮಾತ್ರ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ಇದರಿಂದಾಗಿ ನೂತನ ಟೊಯೊಟಾ ಕ್ಯಾಮ್ರಿ ಕಾರಿನಿಂದ ಕಂಪನಿಯ ಬ್ರಾಂಡ್ ಇಮೇಜ್ ಹೆಚ್ಚಾಗಬಹುದು ಹೊರತು ಮಾರಾಟ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿಲ್ಲ.
2012ರ ಟೊಯೊಟಾ ಕ್ಯಾಮ್ರಿ ಕಾರು 2.4 ಲೀಟರಿನ, ನಾಲ್ಕು ಸಿಲಿಂಡರಿನ ಪೆಟ್ರೋಲ್ ಎಂಜಿನ್ ಹೊಂದಿರಲಿದೆ. ಮತ್ತೊಂದು ಆವೃತ್ತಿಯು 3.5 ಲೀಟರ್ ವಿ6 ಎಂಜಿನ್ ಹೊಂದಿರಲಿದೆ. ನೂತನ ಕಾರಿನಲ್ಲಿ ಹಲವು ಸುರಕ್ಷತೆ ಮತ್ತು ಅದ್ದೂರಿ ಫೀಚರುಗಳಿರುವ ನಿರೀಕ್ಷೆಯಿದೆ.
ಸದ್ಯ ರಸ್ತೆಯಲ್ಲಿರುವ ಟೊಯೊಟಾ ಕ್ಯಾಮ್ರಿ ಕಾರಿನ ದರ 21.58 ಲಕ್ಷ ರುಪಾಯಿ ಮತ್ತು 23.73 ಲಕ್ಷ ರು. ಇದೆ. ಟೊಯೊಟಾ ಕ್ಯಾಮ್ರಿ 2.4 ಲೀಟರಿನ 4 ಸಿಲಿಂಡರ್ ಎಂಜಿನ್ ಹೊಂದಿದೆ. ಹೊಸ ಕಾರು ಹೆಚ್ಚು ಕಾರ್ಯಕ್ಷಮತೆಯ ಮತ್ತು ಆಕರ್ಷಕ ವಿನ್ಯಾಸದಿಂದ ಗಮನ ಸೆಳೆಯುವ ನಿರೀಕ್ಷೆಯಿದೆ.


Click it and Unblock the Notifications









