ಟೊಯೊಟಾ ಹೊಸ ಆಲ್ಟಿಸ್ ಏರೊ ರಸ್ತೆಗೆ, ದರ 11 ಲಕ್ಷ ರು.
ದೇಶದ ವಹಿವಾಟು ಯಶಸ್ವಿಯಾಗಿ ಹತ್ತನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮಕ್ಕೆ ಟೊಯೊಟಾ ಕಿರ್ಲೊಸ್ಕರ್ ಮೋಟರ್(ಟಿಕೆಎಂ) ನೂತನ ಲಿಮಿಟೆಡ್ ಅಡಿಷನ್ ಕರೊಲ್ಲಾ ಆಲ್ಟಿಸ್ ಏರೊ ಕಾರನ್ನು ಪರಿಚಯಯಿಸಿದೆ. ನೂತನ ಸ್ಪೋರ್ಟಿ ವಿನ್ಯಾಸದ ಕರೊಲ್ಲಾ ಆಲ್ಟಿಸ್ ಪೆಟ್ರೋಲ್ ಆವೃತ್ತಿಗೆ ದೆಹಲಿ ಎಕ್ಸ್ ಶೋರೂಂ ದರ 11,47,748 ರುಪಾಯಿ.
ಕಂಪನಿಯು ಲಿಮೆಟಿಡ್ ಅಡಿಷನ್ ಕರೊಲ್ಲಾ ಆಲ್ಟಿಸ್ ಏರೊ ಕಾರಿನ 500 ಯುನಿಟ್ ಹೊರತಂದಿದೆ. ಈ 500 ಕಾರುಗಳನ್ನು ಈ ವರ್ಷದ ಸೆಪ್ಟಂಬರ್ ತಿಂಗಳವರೆಗೆ ಮಾರಾಟ ಮಾಡಲು ಕಂಪನಿ ನಿರ್ಧರಿಸಿದೆ. ಕರೊಲ್ಲಾ ಅಲ್ಟಿಸ್ ಕಾರಿನ ಪರಿಷ್ಕೃತ ಆವೃತ್ತಿಯಾದ ಹೊಸ ಏರೊ ಒಂದಿಷ್ಟು ವಿಶೇಷ ವಿನ್ಯಾಸ ಮತ್ತು ವಿಶೇಷ ಫೀಚರುಗಳಿಂದ ಇಷ್ಟವಾಗುತ್ತದೆ.
ನೂತನ ಟೊಯೊಟಾ ಕರೊಲ್ಲಾ ಆಲ್ಟಿಸ್ ಯುರೊ 4 ಜೆ ಗ್ರೇಡ್ 1.8 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದರ ಏರೋ ಡೈನಾಮಿಕ್ ವಿನ್ಯಾಸ ಅತ್ಯುತ್ತಮ ಸವಾರಿಗೆ ಸಹಕರಿಸುತ್ತದೆ. ನೂತನ ಆಲ್ಟಿಸ್ ಏರೊ ಕಾರು ಸಿಲ್ವರ್ ಮೈಕಾ ಮೆಟಾಲಿಕ್ ಮತ್ತು ಕಪ್ಪು ಮೈಕಾ ಬಣ್ಣಗಳಲ್ಲಿ ದೊರಕುತ್ತದೆ.
"ದೇಶದಲ್ಲಿನ ಕಂಪನಿಯ ವಹಿವಾಟಿಗೆ ಹತ್ತು ವರ್ಷಗಳು ಸಂದ ನೆನಪಿಗಾಗಿ ನೂತನ ಲಿಮಿಟೆಡ್ ಅಡಿಷನ್ ಕರೊಲ್ಲಾ ಆಲ್ಟಿಸ್ ಏರೊ ಕಾರನ್ನು ಪರಿಚಯಿಸಿದ್ದೇವೆ. ದೇಶದಲ್ಲಿ ಕರೊಲ್ಲಾ ಆಲ್ಟಿಸ್ ಹೆಚ್ಚು ಜನಪ್ರಿಯ ಆವೃತ್ತಿಯಾಗಿದ್ದು, ಗ್ರಾಹಕರಿಗೆ ಸ್ಪೋರ್ಟಿ ಸವಾರಿ ಅನುಭವ ನೀಡಲಿದೆ" ಎಂದು ಟೊಯೊಟಾ ಕಿರ್ಲೊಸ್ಕರ್ ಕಂಪನಿಯ ಡೆಪ್ಯೂಟಿ ವ್ಯವಸ್ಥಾಪಕ ನಿರ್ದೇಶಕರಾದ ಸಂದೀಪ್ ಸಿಂಗ್ ಹೇಳಿದ್ದಾರೆ.
ಹೊಸ ಕರೊಲ್ಲಾ ಆಲ್ಟಿಸ್ ಏರೊ ಕಾರು ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಮಾತ್ರ ದೊರಕುತ್ತದೆ. ಆದರೆ ಗ್ರಾಹಕರ ಬೇಡಿಕೆಯನ್ನು ನೋಡಿಕೊಂಡು ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ಕರೊಲ್ಲಾ ಆಲ್ಟಿಸ್ ಏರೊ ಪರಿಚಯಿಸಲು ಕಂಪನಿ ಯೋಜಿಸಿದೆ.


Click it and Unblock the Notifications









