ಐಪಿಎಲ್‌ನಲ್ಲಿ ಇದೊಂದೇ ಈ ವರ್ಷದ ಒಳ್ಳೆ ಕೆಲಸ
ಎಲ್ಲಾ ಐಪಿಎಲ್ ಕ್ರಿಕೆಟ್ ಆಟಗಾರರು ರುಜು ಮಾಡಿದ ಐಪಿಎಲ್ ಅಡಿಷನ್ ವೆಂಟೊ ಕಾರಿನ ಹರಾಜಿನಿಂದ ಬಂದ ಹಣವನ್ನು ವಿಶ್ವ ವನ್ಯಜೀವಿ ನಿಧಿ(ಡಬ್ಲ್ಯುಡಬ್ಲ್ಯುಎಫ್)ಗೆ ನೀಡುವುದಾಗಿ ಕಾರು ಕಂಪನಿ ಫೋಕ್ಸ್‌ವ್ಯಾಗನ್ ಪ್ರಕಟಿಸಿದೆ. ಈ ಮೂಲಕ ವನ್ಯಜೀವಿಗಳನ್ನು ಉಳಿಸುವ ವಿಶ್ವ ಕೈಂಕರ್ಯದಲ್ಲಿ ಐಷಾರಾಮಿ ಕಾರು ಕಂಪನಿ ಕೈ ಜೋಡಿಸಲಿದೆ.
ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ವರ್ಲ್ಡ್ ವೈಲ್ಡ್ ಲೈಫ್ ಫಂಡ್ ನಿಧಿ(ಡಬ್ಲ್ಯುಡಬ್ಲ್ಯುಎಫ್) ಸಂಘಟನೆಯು ಕಾರ್ಯ ನಿರ್ವಹಿಸುತ್ತದೆ. ಹೆಚ್ಚುವರಿ ನಿಧಿ ಸಂಗ್ರಹಕ್ಕಾಗಿ ಫೋಕ್ಸ್‌ವ್ಯಾಗನ್ ಕಂಪನಿಯು ಐಪಿಎಲ್ ನೆನಪಿನ ಕಾಣಿಕೆಗಳನ್ನೂ ಹರಾಜು ಮಾಡಲಿದೆ.
ಫೋಕ್ಸ್‌ವ್ಯಾಗನ್ ಕಂಪನಿಯು ಕಳೆದ ವರ್ಷದಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಜೊತೆ ಪ್ರಾಯೋಜಕತ್ವ ಆರಂಭಿಸಿತ್ತು. ಕಂಪನಿಯು ಕಳೆದ ವರ್ಷ ಮೊದಲ ಐಪಿಎಲ್ ಅಡಿಷನ್ ವೆಂಟೊ ಕಾರು ಪರಿಚಯಿಸಿತ್ತು. ಈ ವರ್ಷ ಕಂಪನಿಯು ಐಪಿಎಲ್ ಅಡಿಷನ್ ಪೊಲೊ ಕಾರು ಕೂಡ ಮಾರಾಟ ಮಾಡುತ್ತಿದೆ. ಈ ಹೊಸ ಆವೃತ್ತಿಗಳಲ್ಲಿ ಹೊಸ ಮನರಂಜನೆ ವ್ಯವಸ್ಥೆಗಳಿದ್ದು, ಐಪಿಎಲ್ ನೇರಪ್ರಸಾರ ನೋಡುವ ವ್ಯವಸ್ಥೆಯೂ ಇದೆ.
ಐಪಿಎಲ್ ಟೂರ್ನಿ ಮುಗಿದ ನಂತರ ಫೋಕ್ಸ್‌ವ್ಯಾಗನ್ ವೆಂಟೊ ಐಪಿಎಲ್ ಅಡಿಷನ್ 2 ಹರಾಜಾಗಳಿದೆ. ದೇಶಾದ್ಯಂತ ಇರುವ ಕಾರು ಮತ್ತು ಕ್ರಿಕೆಟ್ ಅಭಿಮಾನಿಗಳು ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ವರ್ಷ ಐಪಿಎಲ್ ಅಡಿಷನ್ ಕಾರನ್ನು ಬೆಂಗಳೂರಿನ ವ್ಯಕ್ತಿಯೊಬ್ಬರು ಹರಾಜಿನಲ್ಲಿ ತನ್ನದಾಗಿಸಿಕೊಂಡಿದ್ದರು. ಈ ವರ್ಷ ಯಾರು ಹರಾಜಿನಲ್ಲಿ ಖರೀದಿಸುತ್ತಾರೋ ಕಾದುನೋಡಬೇಕಿದೆ.
ಬಹುಶಃ ಇದೊಂದೇ ಈ ವರ್ಷ ಐಪಿಎಲ್ ಮಾಡಿದ ಒಳ್ಳೆ ಕೆಲಸವೆನ್ನುವುದು ಕನ್ನಡ ಡ್ರೈವ್‌ಸ್ಪಾರ್ಕ್ ಅಭಿಪ್ರಾಯ. ಏನಂತೀರಾ?


Click it and Unblock the Notifications









