ಗುಜರಾತ್ ರಾಜ್ಯದ ಮೇಲೆ ಫೋಕ್ಸ್‌ವ್ಯಾಗನ್ ಕಣ್ಣು
ಗುಜರಾತಿನಲ್ಲಿ ನೂತನ ಘಟಕ ನಿರ್ಮಿಸುವ ಸಾಧ್ಯತೆಗಳತ್ತ ಜರ್ಮನಿಯ ವಾಹನ ತಯಾರಿಕಾ ಕಂಪನಿ ಫೋಕ್ಸ್‌ವ್ಯಾಗನ್ ಯೋಜಿಸುತ್ತಿದೆ. ಕಂಪನಿಯು ಮಹಾರಾಷ್ಟ್ರದಲ್ಲಿ ಮಾಡಲು ಉದ್ದೇಶಿಸಿದ 2 ಸಾವಿರ ಕೋಟಿ ರುಪಾಯಿ ಹೂಡಿಕೆಯನ್ನು ತಡೆ ಹಿಡಿದಿದೆ.
ಅಹಮಾದಬಾದ್ ಮತ್ತು ವಡೋದರ ಸಮೀಪದ ಭೂಮಿಗಳನ್ನು ಫೋಕ್ಸ್‌ವ್ಯಾಗನ್ ಕಂಪನಿಯ ಅಧಿಕಾರಿಗಳಿಗೆ ಗುಜರಾತ್ ಸರಕಾರ ತೋರಿಸಿರುವುದಾಗಿ ವರದಿಗಳು ಹೇಳಿವೆ. ಆದರೂ ಕಂಪನಿಯು ಗುಜರಾತ್‌ಗೆ ಎಷ್ಟು ಪ್ರಮಾಣದ ಹೂಡಿಕೆ ಮಾಡಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
ವ್ಯಾಟ್ ಮರುಪಾವತಿ ಕುರಿತಾಗಿ ಅಸ್ಪಷ್ಟತೆ ಇರುವ ಹಿನ್ನಲೆಯಲ್ಲಿ ಫೋಕ್ಸ್‌ವ್ಯಾಗನ್ ಕಂಪನಿಯು ಮಹಾರಾಷ್ಟ್ರದಲ್ಲಿನ ವಿಸ್ತರಣಾ ಯೋಜನೆಗಳನ್ನು ತಡೆ ಹಿಡಿದಿದೆ. ದೇಶದಲ್ಲಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಇನ್ನಷ್ಟು ಹೂಡಿಕೆ ಮಾಡುವುದಾಗಿ ಕಂಪನಿ ಈಗಾಗಲೇ ಪ್ರಕಟಿಸಿದೆ. ಕಂಪನಿಯು ಈಗ ಚಕನ್, ಔರಂಗಬಾದ್‌ನಲ್ಲಿ ಘಟಕಗಳನ್ನು ಹೊಂದಿದೆ.
ಗುಜರಾತ್ ರಾಜ್ಯವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ವಾಹನ ಕಂಪನಿಗಳನ್ನು ಸೆಳೆಯುತ್ತಿದೆ. ಅಲ್ಲಿ ಈಗಾಗಲೇ ಜನರಲ್ ಮೋಟರ್ಸ್ ಮತ್ತು ಟಾಟಾ ಮೋಟರ್ಸ್ ಕಂಪನಿಗಳು ವಾಹನ ಉತ್ಪಾದಿಸುತ್ತಿವೆ.
ಗುಜರಾತಿನಲ್ಲಿ ಫೋರ್ಡ್ ಘಟಕ ನಿರ್ಮಾಣ ಹಂತದಲ್ಲಿದೆ. ಮಾರುತಿ ಸುಜುಕಿ, ಹೀರೊ ಮೊಟೊಕಾರ್ಪ್, ಪ್ಯೂಜೊ ಸಿಟ್ರೊನ್ ಕಂಪನಿಗಳು ಘಟಕ ನಿರ್ಮಿಸಲು ಸಿದ್ದತೆ ನಡೆಸುತ್ತಿವೆ. ಗುಜರಾತ್ ರಾಜ್ಯವು ದೇಶದ ಪ್ರಮುಖ ವಾಹನ ಹಬ್ ಆಗುವ ನಿರೀಕ್ಷೆಗಳಿವೆ.


Click it and Unblock the Notifications









