ಷೆವರ್ಲೆ ಸೇಲ್: ದೇಶದ ರಸ್ತೆಯಲ್ಲಿ ಗೇಮ್ ಚೇಂಜರ್!
ಸದ್ಯ ಕಂಪನಿಯು ಬಿ1 ಸೆಗ್ಮೆಂಟಿನಲ್ಲಿ ಡೀಸೆಲ್ ಬೀಟ್ ಮಾರಾಟ ಮಾಡುತ್ತಿದೆ. ಷೆವರ್ಲೆ ಸೇಲ್ ಆಗಮಿಸಿದ ನಂತರ ದೇಶದಲ್ಲಿ ಜನರಲ್ ಮೋಟರ್ಸ್ ವಾಹನ ಮಾರಾಟ ಗಮನಾರ್ಹವಾಗಿ ಏರಿಕೆ ಕಾಣುವ ನಿರೀಕ್ಷೆಯಿದೆ. ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ ಕಂಪನಿಯ ವಾಹನ ಮಾರಾಟ ಶೇಕಡ 11ರಷ್ಟು ಇಳಿಮುಖವಾಗಿದೆ.
ದೇಶದಲ್ಲಿ ಇತ್ತೀಚೆಗೆ ಜನರಲ್ ಮೋಟರ್ಸ್ ಕಂಪನಿಯ ಒಟ್ಟಾರೆ ವಾಹನ ಮಾರಾಟ ಇಳಿಮುಖವಾಗಿದೆ. ಪೆಟ್ರೋಲ್ ದರ ದುಬಾರಿ, ಹೆಚ್ಚಿದ ಬಡ್ಡಿದರ ಇತ್ಯಾದಿಗಳು ಕಾರು ಮಾರಾಟ ಇಳಿಕೆ ಕಾಣಲು ಪ್ರಮುಖ ಕಾರಣವೆಂದು ಕಂಪನಿ ಹೇಳಿದೆ. ಹಬ್ಬದ ವೇಳೆಗೆ ಮಾರಾಟ ಗರಿಗೆದರುವ ನಿರೀಕ್ಷೆಯನ್ನು ಕಂಪನಿ ವ್ಯಕ್ತಪಡಿಸಿದೆ.
ಶೀಘ್ರದಲ್ಲಿ ಆಗಮಿಸಲಿರುವ ಷೆವರ್ಲೆ ಸೇಲ್ ಕಾರಿನ ಮೇಲೆ ಜನರಲ್ ಮೋಟರ್ಸ್ ಹೆಚ್ಚಿನ ಭರವಸೆಯಿಟ್ಟಿದೆ. ಕಂಪನಿಯು ಸೇಲ್ ಕಾರನ್ನು ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳೆರಡರಲ್ಲೂ ನೀಡುವ ನಿರೀಕ್ಷೆಯಿದೆ.
ನೂತನ ಸೇಲ್ ಕಾರಿನ ಪೆಟ್ರೋಲ್ ಆವೃತ್ತಿಯು ಜಾಗತಿಕ ಮಾರುಕಟ್ಟೆಯಲ್ಲಿ 1.2 ಲೀಟರ್ ಎಸ್ ಟೆಕ್ ಮತ್ತು 1.4 ಲೀಟರ್ ಎಸ್ ಟೆಕ್ ಆಯ್ಕೆಗಳಲ್ಲಿ ದೊರಕುತ್ತದೆ. ಫಿಯೆಟ್ ಕಂಪನಿಯ 1.3 ಲೀಟರಿನ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ಷೆವರ್ಲೆ ಸೇಲ್ ದೊರಕುವ ನಿರೀಕ್ಷೆಯಿದೆ.
ನಿಜಕ್ಕೂ ದೇಶದಲ್ಲಿ ಜನರಲ್ ಮೋಟರ್ಸ್ ಕಂಪನಿಗೆ ಷೆವರ್ಲೆ ಸೇಲ್ ಹೊಸ ಭಾಷ್ಯ ಬರೆಯಲಿದೆಯೇ? ಕಳೆದ ತಿಂಗಳು ಚೀನಾದಲ್ಲಿ ಸುಮಾರು 25 ಸಾವಿರ ಯುನಿಟ್ ಷೆವರ್ಲೆ ಸೇಲ್ ಕಾರು ಮಾರಾಟವಾಗಿದೆ. ದೇಶದಲ್ಲೂ ಸೇಲ್ ಕಾರಿಗೆ ಇಷ್ಟೇ ಬೇಡಿಕೆ ಉಂಟಾಗಬಹುದೇ?
ನೂತನ ಷೆವರ್ಲೆ ಸೇಲ್ ಆರಂಭಿಕ ದರ ಸುಮಾರು 4 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.


Click it and Unblock the Notifications









