ದುಬಾರಿ ಪೆಟ್ರೋಲ್: ಟಾಟಾ ನ್ಯಾನೊ ಕಾರೇ ಬೆಸ್ಟ್
ಇಡೀ ಭರತಖಂಡವೇ ಪೆಟ್ರೋಲ್ ದರ ಹೆಚ್ಚಳವನ್ನು ಶಪಿಸುತ್ತಿರುವಾಗ ಆರಾಮವಾಗಿರುವ ಈ ಕಾರು ಮಾಲಿಕರುಗಳು ಯಾರು ಎನ್ನುವಿರಾ? ಅವರೇ ಸ್ವಾಮಿ, ಜಗತ್ತಿನ ಅಗ್ಗದ ಕಾರು ಖ್ಯಾತಿಯ, ರತನ ಟಾಟಾ ಕನಸಿನ ಕೂಸು, ಟಾಟಾ ಮೋಟರ್ಸ್ ಕಂಪನಿಯ ನ್ಯಾನೊ ಕಾರು ಮಾಲಿಕರು!
ನ್ಯಾನೊ ಮಾಲಿಕರಿಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆಯೇ ಕಾಣುತ್ತಿಲ್ಲ. ಅವರಿಗೆ ಪೆಟ್ರೋಲ್ ದರ ಹೆಚ್ಚಾದರೂ ಪ್ರತಿ ಕಿಲೋಮೀಟರ್ ಪ್ರಯಾಣಕ್ಕೆ ನಾಲ್ಕು ರುಪಾಯಿಯಷ್ಟು ಮಾತ್ರ ಖರ್ಚಾಗುತ್ತದೆ. ಯಾಕೆಂದರೆ ಟಾಟಾ ನ್ಯಾನೊ ಮೈಲೇಜ್ ಹೆಚ್ಚಿದೆ. ಹೀಗಾಗಿ ಅವರಿಗೆ ಚಿಂತಿಸಲು ಕಾರಣವಿಲ್ಲ.
ಟಾಟಾ ನ್ಯಾನೊ ದೇಶದ ಅತ್ಯಧಿಕ ಮೈಲೇಜ್ ಕಾರು. ಇದು ಪ್ರತಿಲೀಟರಿಗೆ ಸುಮಾರು 25 ಕಿ.ಮೀ. ಮೈಲೇಜ್ ನೀಡುವುದಾಗಿ ಸರ್ಟಿಫಿಕೆಟ್ ಪಡೆದಿದೆ. ಪ್ರತಿಲೀಟರಿಗೆ ಸರಾಸರಿ 20 ಕಿ.ಮೀ. ಮೈಲೇಜಂತೂ ಸಿಕ್ಕೇ ಸಿಗುತ್ತದೆ. ನ್ಯಾನೊ ಬಿಟ್ಟು ಬೇರೆ ಕಾರು ಖರೀದಿಸಿದ ಕೆಲವರಿಗೆ ಈಗ ಚಿಂತೆ ಶುರುವಾಗಿದೆಯಂತೆ!
ಸಣ್ಣಗಾತ್ರ, ಕಡಿಮೆದರ, ಅತ್ಯಧಿಕ ಮೈಲೇಜ್ ಇತ್ಯಾದಿ ಕಾರಣಗಳಿಂದ ಟಾಟಾ ನ್ಯಾನೊ ಸಿಟಿ ರಸ್ತೆಗೆ ಅತ್ಯುತ್ತಮ ಕಾರು. ಆದರೆ ಟಾಟಾ ಮೋಟರ್ಸ್ ನಿರೀಕ್ಷೆಗೆ ತಕ್ಕಂತೆ ಈ ಪುಟ್ಟ ಕಾರು ಮಾರಾಟವಾಗಿಲ್ಲ. ಇದೀಗ ಕಂಪನಿಯು ಪ್ರತಿತಿಂಗಳು ಸರಿಸುಮಾರು 10 ಸಾವಿರದಷ್ಟು ನ್ಯಾನೊ ಕಾರುಗಳನ್ನು ಮಾರಾಟ ಮಾಡುತ್ತಿದೆ.
ಮುಂಬರುವ ದಿನಗಳಲ್ಲಿ ಟಾಟಾ ಮೋಟರ್ಸ್ ಫ್ಯಾಕ್ಟರಿಯಿಂದ ಹೊರಬರುವ ನ್ಯಾನೊ ಕಾರುಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. 2012ರ ನ್ಯಾನೊ ಆವೃತ್ತಿಯ ಪರಿಷ್ಕೃತ ಎಂಜಿನ್ ಹೆಚ್ಚು ಮೈಲೇಜ್ ನೀಡುತ್ತದೆ. ಕಂಪನಿಯು ಇನ್ಮುಂದೆ ಅತ್ಯಧಿಕ ಮೈಲೇಜನ್ನು ಎತ್ತಿತೋರಿಸಿ ಮಾರಾಟ ಹೆಚ್ಚಿಸಿಕೊಳ್ಳುವ ತಂತ್ರ ಅನುಸರಿಸುವ ನಿರೀಕ್ಷೆಯಿದೆ.
ಟಾಟಾ ನ್ಯಾನೊ 15 ಲೀಟರಿನ ಇಂಧನ ಟ್ಯಾಂಕ್ ಹೊಂದಿದೆ. ಇದರ ಸರಾಸರಿ ಮೈಲೇಜ್ ಸುಮಾರು 20 ಕಿ.ಮೀ. ಒಮ್ಮೆ ಫುಲ್ ಟ್ಯಾಂಕ್ ತುಂಬಿಸಿದ್ರೆ ಸುಮಾರು 300 ಕಿ.ಮೀ. ಪ್ರಯಾಣ ಮುಗಿಸುವರೆಗೆ ನೋ ಪ್ರಾಬ್ಲಂ. ಪ್ರತಿ ಕಿಲೋಮೀಟರಿಗೆ ಟಾಟಾ ನ್ಯಾನೊ ರನ್ನಿಂಗ್ ವೆಚ್ಚ ಕೇವಲ ನಾಲ್ಕು ರುಪಾಯಿ.
ಇನ್ಮುಂದೆ ಗ್ರಾಹಕರು ಕಾರು ಖರೀದಿಸುವಾಗ ಕಾರಿನ ದರ, ರನ್ನಿಂಗ್ ವೆಚ್ಚ, ಮೈಲೇಜ್ ಇತ್ಯಾದಿಗಳಿಗೆ ಹೆಚ್ಚು ಒತ್ತು ನೀಡಬೇಕಿದೆ. ಇಂತಹ ಸನ್ನಿವೇಶದಲ್ಲಿ ನ್ಯಾನೊ ಕಾರೇ ಬೆಸ್ಟ್. ಏನಂತೀರಿ?


Click it and Unblock the Notifications









