ಇದು ಜಗತ್ತಿನ ಅತ್ಯಂತ ಅತ್ಯಂತ ಉದ್ದವಾದ ಬಸ್
ಬೆಂಗಳೂರಿಗೆ ಪ್ರಪ್ರಥಮ ಬಾರಿಗೆ ಬಂದವರು ಬಿಎಂಟಿಸಿಯ ಡಬಲ್ ಜಾಯಿಂಟ್ ಬಸ್ ನೋಡಿ "ಅಬ್ಬಾ ಉದ್ದದ ಬಸ್" ಎಂದು ಉದ್ಗರಿಸಬಹುದು. ಆದರೆ ಚೀನಾದ ರಸ್ತೆಗೆ ಹೊಸ ಬಸ್ಸೊಂದು ಆಗಮಿಸಿದೆ. ಅದರ ಉದ್ದ ಬರೋಬ್ಬರಿ 82 ಅಡಿ ಇದೆ. ಸಾರ್ವಜನಿಕ ಸಾರಿಗೆಗಾಗಿ ಆಗಮಿಸಿರುವ Youngman JNP2650G ಹೆಸರಿನ ಬಸ್ ಜಗತ್ತಿನ ಅತ್ಯಂತ ಉದ್ದವಾದ ಬಸ್ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಯಂಗ್ ಮ್ಯಾನ್ ಬಸ್ಸಿನಲ್ಲಿ ಸುಮಾರು 300 ಜನರು ಆರಾಮವಾಗಿ ಪ್ರಯಾಣಿಸಬಹುದು. ನಮ್ಮ ಬಿಎಂಟಿಸಿಯಂತೆ ನಿಲ್ಲಲು ಜಾಗವಿಲ್ಲದಂತೆ ಜನರನ್ನು ತುರುಕಿದರೆ ಸಾವಿರಾರು ಜನರು ಹಿಡಿಯಬಹುದೇನೋ. ವಿಶೇಷವೆಂದರೆ ಈ ದೊಡ್ಡ ಬಸ್ಸಿನಲ್ಲಿ ಕೇವಲ 40 ಸೀಟುಗಳಿವೆ. ಆರಾಮವಾಗಿ ನಿಂತು ಪ್ರಯಾಣಿಸಲು ಸೂಕ್ತವಾಗುವಂತೆ ಈ ಬಸ್ ಅಭಿವೃದ್ಧಿಪಡಿಸಲಾಗಿದೆ.
ಅತ್ಯಧಿಕ ಜನಸಂದಣಿಯಿರುವ ಬೀಜಿಂಗ್ ಮತ್ತು ಇತರ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಸಾರಿಗೆಯಾಗಿ ಈ ಬಸ್ ಬಳಸಿಕೊಳ್ಳಲಾಗುತ್ತಿದೆ. ನಗರ ಸಾರಿಗೆಗೆ ಸೂಕ್ತವಾಗುವಂತೆ ಈ ಉದ್ದದ ಬಸ್ ಗಂಟೆಗೆ ಗರಿಷ್ಠ 50 ಕಿ.ಮೀ. ವೇಗದಲ್ಲಿ ಸಾಗಬಹುದು.
ವಿಶ್ವದ ಅತಿ ಉದ್ದದ ಬಸ್ಸಿಗೆ ವಿಶೇಷ ಲೇನ್ ನಿರ್ಮಿಸುವ ಕುರಿತು ಚೀನಾ ಸಾರಿಗೆ ಆಡಳಿತ ಚಿಂತಿಸುತಿದೆ. ಖಾಸಗಿ ಕಾರು ಬೈಕು ಬಳಕೆ ಕಡಿಮೆ ಮಾಡಿ, ಹೆಚ್ಚು ಜನರು ಆರಾಮವಾಗಿ ಸಾರಿಗೆ ವಾಹನಗಳನ್ನು ಬಳಸುವಂತಾಗಲು ಯಂಗ್ ಮ್ಯಾನ್ ಬಸ್ ನೆರವಾಗಲಿದೆ ಎಂದು ಚೀನಾ ಸಾರಿಗೆ ಅಧಿಕಾರಿಯೊಬ್ಬರು ಹೇಳಿದ್ದಾರೆ.


Click it and Unblock the Notifications









