ಕೋಟಿ ಬೆಲೆಬಾಳುವ ರೇಂಜ್ ರೋವರ್ ಸ್ಪೋರ್ಟ್ ಲಾಂಚ್
ವರ್ಷಾರಂಭದಲ್ಲಿ ಯುರೋಪ್ ಮಾರುಕಟ್ಟೆಯನ್ನು ಪ್ರವೇಶ ಪಡೆದಿದ್ದ ಆಲ್ ನ್ಯೂ 2013 ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್, ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಕೋಟಿ ಬೆಲೆಬಾಳುವ ರೇಂಜ್ ರೋವರ್ ಮುಂಬೈ ಎಕ್ಸ್ ಶೋ ರೂಂ ದರ 1.09 ಕೋಟಿ ರು.ಗಳಾಗಿವೆ.
ಹಗುರ ಭಾರದ ತಲಹದಿಯಲ್ಲಿ ನಿರ್ಮಿಸಲಾಗಿರುವುದು ನೂತನ ರೇಂಜ್ ರೋವರ್ ಸ್ಪೋರ್ಟ್ ಕಾರಿನ ಪ್ರಮುಖ ವಿಶೇಷತೆಯಾಗಿದೆ. ಇದು ತನ್ನ ಹಿಂದಿನ ಆವೃತ್ತಿಗಿಂತಲೂ 420 ಕೆ.ಜಿ.ಗಳಷ್ಟು ಕಡಿಮೆ ಭಾರವನ್ನು ಹೊಂದಿದೆ.

ಆಯಾಮದಲ್ಲೂ ನೂತನ ರೇಂಜ್ ರೋವರ್ ಹಳೆಯ ಆವೃತ್ತಿಯನ್ನು ಮೀರಿಸುತ್ತಿದ್ದು, ಅನುಕ್ರಮವಾಗಿ 62 ಎಂಎಂ ಹಾಗೂ 55 ಎಂಎಂ ಉದ್ದಗಲವನ್ನು ಪಡೆದುಕೊಂಡಿದೆ. ಹಾಗೆಯೇ 278ಎಂಎಂಗಳಷ್ಟು ಹೆಚ್ಚು ಗ್ರೌಂಡ್ ಕ್ಲಿಯರನ್ಸ್ ಪಡೆದುಕೊಂಡಿದೆ. ಇನ್ನು ಹೆಚ್ಚು ಮಾತನಾಡುವುದಾದರೆ ಹಳೆಯ ಆವೃತ್ತಿಗಿಂತಲೂ 178 ಎಂಎಂ ಉದ್ದವಾದ ವೀಲ್ ಬೇಸ್ ಕೂಡಾ ಪಡೆದುಕೊಂಡಿದೆ.

ಇನ್ನು ಇದೇ ಮೊದಲ ಬಾರಿಗೆ 5+2 ಸಿಟ್ಟಿಂಗ್ ವ್ಯವಸ್ಥೆಯನ್ನು ರೇಂಜ್ ರೋವರ್ ಸ್ಪೋರ್ಟ್ ಹೊಂದಿದೆ. ಅಂತೆಯೇ ಇದರ ಮೂರನೇ ಸಾಲಿನಲ್ಲಿ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಮಕ್ಕಳಿಗೆ ಕುಳಿತುಕೊಳ್ಳಬಹುದಾದ ಸೀಟು ಲಗತ್ತಿಸಲಾಗಿದೆ.

ಭಾರತ ಆವೃತ್ತಿಯ ರೇಂಜ್ ರೋವರ್ ಸ್ಪೋರ್ಟ್ಸ್ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಇದು 3.0 ಲೀಟರ್ ವಿ6 ಡೀಸೆಲ್ ಹಾಗೂ 5.0 ಲೀಟರ್ ಸೂಪರ್ ಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಸ್ಟಾರ್ಟ್ ಸ್ಟಾರ್ಟ್ ಫಂಕ್ಷನ್ ಜತೆ ಎಂಟು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಇದರ ವಿ6 ಡೀಸೆಲ್ ಎಂಜಿನ್ 292 ಅಶ್ವಶಕ್ತಿ (600ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, ಪ್ರತಿ ಲೀಟರ್‌ಗೆ 13.33 ಕೀ.ಮೀ. ಮೈಲೇಜ್ ನೀಡಲಿದೆ.

ಇನ್ನೊಂದೆಡೆ ಸೂಪರ್ ಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ 510 ಅಶ್ವಶಕ್ತಿ (625 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದು ಪ್ರತಿ ಲೀಟರ್‌ಗೆ 7.81 ಕೀ.ಮೀ. ಮಾತ್ರ ಮೈಲೇಜ್ ಹೊಂದಿರಲಿದೆ.

ನಿರ್ವಹಣೆಯ ಬಗ್ಗೆ ಮೆಲುಕು ಹಾಕಿದರೆ ಡೀಸೆಲ್ ಎಂಜಿನ್ ಕೇವಲ ಏಳು ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 100 ಕೀ.ಮೀ. ವೇಗವರ್ಧಿಸಲಿದ್ದು, ಗಂಟೆಗೆ 222 ಕೀ.ಮೀ. ಗರಿಷ್ಠ ವೇಗ ಪಡೆದುಕೊಳ್ಳಲಿದೆ. ಇನ್ನೊಂದೆಡೆ ಪೆಟ್ರೋಲ್ ಎಂಜಿನ್ 5.3 ಸೆಕೆಂಡುಗಳಲ್ಲಿ 100 ಕೀ.ಮೀ. ಹಾಗೂ ಗರಿಷ್ಠ 250 ಕೀ.ಮೀ. ವೇಗ ಕಂಡುಕೊಳ್ಳಲಿದೆ.

ಭಾರತದಲ್ಲಿ ರೇಂಜ್ ರೋವರ್ ಸ್ಪೋರ್ಟ್, ಎಸ್, ಎಸ್‌ಇ, ಎಚ್‌ಎಸ್‌ಇ ಮತ್ತು ಆಟೋಬೈಯೋಗ್ರಾಫಿ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.

ದರ ಮಾಹಿತಿ
ರೇಂಜ್ ರೋವರ್ ಸ್ಪೋರ್ಟ್ ವಿ6 ಡೀಸೆಲ್- 1.09 ಕೋಟಿ ರು.
ರೇಂಜ್ ರೋವರ್ ಸ್ಪೋರ್ಟ್ ಸೂಪರ್ ಚಾರ್ಜ್ಡ್ ವಿ8 ಪೆಟ್ರೋಲ್- 1.65 ಕೋಟಿ ರು.


Click it and Unblock the Notifications








