ಗುಡ್ ನ್ಯೂಸ್: ಬೆಂಗ್ಳೂರಲ್ಲಿ ರಸ್ತೆ ಅಪಘಾತ ಇಳಿಮುಖ
ಬೆಂಗ್ಳೂರಿಗರು ಹೆಮ್ಮೆಪಡುವಂತಹ ಸುದ್ದಿ ಬಂದಿದ್ದು, ಅತಿ ಕಡಿಮೆ ರಸ್ತೆ ಅಪಘಾತಗಳು ನಗರದಲ್ಲಿ ದಾಖಲಾಗಿವೆ. ಕಳೆದ 20 ವರ್ಷಗಳ ಪೈಕಿ 2012ನೇ ಸಾಲಿನಲ್ಲಿ ನಗರದಲ್ಲಿ ಅತಿ ಕಡಿಮೆ ರಸ್ತೆ ಅಪಘಾತಗಳು ಸಂಭವಿಸಿದೆ.
2003ನೇ ಸಾಲಿಗೆ ಹೋಲಿಸಿದಾಗ ಕಳೆದ ವರ್ಷದಲ್ಲಿ ರಸ್ತೆ ಅಪಘಾತಗಳು ಶೇಕಡಾ 50ರಷ್ಟು ಇಳಿಕೆ ಕಂಡಿವೆ. ಹಾಗೆಯೇ ಕಳೆದ 11 ವರ್ಷಗಳಲ್ಲಿ ಅತಿ ಕಡಿಮೆ ಅಪಮೃತ್ಯುಗಳು ಸಂಭವಿಸಿವೆ. ವರದಿಯ ಪ್ರಕಾರ 2003ನೇ ಸಾಲಿನಲ್ಲಿ ಒಟ್ಟು 10505 ರಸ್ತೆ ಅಪಘಾತಗಳು ಸಂಭವಿಸಿದ್ದರೆ 2012ರಲ್ಲಿ ಇದು 5471 ಸಂಖ್ಯೆಗೆ ಕುಸಿದಿದೆ.
ಇಲ್ಲಿ ಗಮನಾರ್ಹ ಅಂಶವೆಂದರೆ ಕಳೆದ ಹತ್ತು ವರ್ಷಗಳಲ್ಲಿ ವಾಹನಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಈ ನಡುವೆ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿರುವುದು ಖಂಡಿತವಾಗಿಯೂ ಹೆಮ್ಮೆಪಡುವಂತಾಗಿದೆ.
ನಗರದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸ್ ಹಮ್ಮಿಕೊಂಡಿರುವ ಪರಿಣಾಮಕಾರಿ ಹಾಗೂ ಸುರಕ್ಷತಾ ಶಿಬಿರಗಳಿಂದಾಗಿ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ನೆರವಾಗಿದೆ. ಈ ನಿಟ್ಟಿನಲ್ಲಿ ಫೇಸ್‌ಬುಕ್, ಟ್ರಾಫಿಕ್ ಸಲಹಾ ಸಮಿತಿ ಹಾಗೂ ನಾಗರಿಕ ವೇದಿಕೆಗಳಲ್ಲಿ ಪರಿಣಾಮಕಾರಿ ಪ್ರಚಾರ ಹಮ್ಮಿಕೊಳ್ಳಲಾಗಿತ್ತು. ಇದೀಗ 2013 ಸಾಲಿನಲ್ಲೂ ಇದನ್ನು ಮುಂದುವರಿಸುವಂತೆ ಕೋರಲಾಗಿದೆ.


Click it and Unblock the Notifications









