ಸದ್ಯದಲ್ಲೇ ಬಿಎಂಟಿಸಿಗೆ 575 ವೋಲ್ವೋ ಬಸ್ ಸೇರ್ಪಡೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಸದ್ಯದಲ್ಲೇ 575 ವೋಲ್ವೋ ಬಸ್‌ಗಳ ಸೇರ್ಪಡೆಯಾಗಲಿದೆ. ಬೆಂಗಳೂರು ಮಹಾನಗರ ಜೀವನದಲ್ಲಿ ಬಿಎಂಟಿಸಿ ಸೇವೆ ಅತ್ಯಮೂಲ್ಯವಾಗಿದ್ದು, ದೈನಂದಿನ 20 ಲಕ್ಷದಷ್ಟು ಜನರು ಪ್ರಯೋಜನ ಪಡೆಯುತ್ತಿದ್ದಾರೆ.
2005ನೇ ಸಾಲಿನಲ್ಲಿ ಉತ್ತಮ ಪರಿಸರ ನಿರ್ವಹಣಾ ಕಾಳಜಿಗಾಗಿ 'ಗೋಲ್ಡನ್ ಪೀಕಾಕ್ ವಿಶೇಷ ಪ್ರಶಸ್ತಿ ಪ್ರಮಾಣಪತ್ರ' ಗೆದ್ದುಕೊಂಡಿದ್ದ ಬಿಎಂಟಿಸಿ ಸಾರ್ವಜನಿಕ ಸಾರಿಗೆ ನಿಗಮ ಸಂಸ್ಥೆಯು ಇದೇ ಮೊದಲ ಬಾರಿಗೆ ಹಿನ್ನಡೆ ಅನುಭವಿಸಿದ್ದು, ನಷ್ಟದಲ್ಲಿ ಓಡಾಡುತ್ತಿದೆ.
ಪ್ರಸ್ತುತ 6,300 ಬಸ್‌ಗಳು ನಿಯಮಿತವಾಗಿ ಓಡಾಡುತ್ತಿವೆ. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್, 75 ಟಾಟಾ ಬಸ್ ಹೊರತಾಗಿ 300 ಅಶೋಕ್ ಲೇಲ್ಯಾಂಡ್ ಬಸ್‌ಗಳಿಗೆ ಆರ್ಡರ್ ಮಾಡಲಾಗಿದ್ದು, ಈ ಪೈಕಿ ಬಿಎಸ್-4 ಪ್ರಧಾನ ನಗರದಲ್ಲೂ ಹಾಗೂ 264 ಬಿಎಸ್-3 ಬಸ್‌ಗಳು ಉಪನಗರದಲ್ಲಿ ಓಡಾಡಲಿದೆ ಎಂದಿದ್ದಾರೆ. ಹಾಗೆಯೇ ಮುಂದಿನ ವರ್ಷ 900 ಹೊಸ ಬಸ್ ಖರೀದಿಸಲು ಯೋಜನೆಯಿದೆ ಎಂದು ತಿಳಿಸಿದ್ದಾರೆ.
ನಗರದಲ್ಲಿ ವೋಲ್ವೋ ಬಸ್ ಸರ್ವೀಸ್ ಅತಿ ಪ್ರಾಮುಖ್ಯವೆನಿಸಿದೆ. ಪ್ರಸ್ತುತ 110 ವೋಲ್ವೋ ಬಸ್‌ಗಳಿವೆ. ಇದೀಗ ಜೂನ್ ವೇಳೆ 575 ವೋಲ್ವೋ ಬಸ್ ಆಗಮನವಾಗಲಿದೆ ಎಂಬ ಮಾಹಿತಿ ನೀಡಿದ್ದಾರೆ.
ಕಂಡೆಕ್ಟರ್ ಚೇಂಜ್ ನೀಡುತ್ತಿಲ್ಲವೇ?
ಈ ನಡುವೆ ಬಸ್ಸಿನ ನಿರ್ವಾಹಕರು ಯಾತ್ರೆ ಬಳಿಕ ಉಳಿದ ಹಣವನ್ನು ಪಾವತಿ ಮಾಡುತ್ತಿಲ್ಲವೆಂಬ ಆರೋಪ ಬಲವಾಗಿ ಕೇಳಿ ಬಂದಿವೆ. ಚೀಟಿಯಲ್ಲಿ ಬರೆದು ಚೇಂಜ್ ನೀಡುತ್ತೇವೆ ಎಂಬ ಭರವಸೆ ನೀಡುತ್ತಿರುವ ಬಸ್ ನಿರ್ವಾಹಕರು ಆಮೇಲೆ ವಂಚಿಸುತ್ತಿರುವುದಾಗಿ ಬಸ್ ಪ್ರಯಾಣಿಕರಿಂದ ದೂರು ದಾಖಲಾಗಿದೆ.
ಅದೇ ಹೊತ್ತಿಗೆ ರಾತ್ರಿ ಎಂಟು ಗಂಟೆಯ ಮೇಲೆ ಮಹಿಳೆಯರಿಗೆ ಮೀಸಲಿಟ್ಟ ಸೀಟುಗಳನ್ನು ಪುರುಷರೇ ಆಕ್ರಮಿಸಿಕೊಂಡಿರುತ್ತಾರೆ ಎಂಬ ಬಗ್ಗೆಯೂ ಆರೋಪಗಳು ಎದ್ದಿವೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications









