ಗ್ರಾಹಕರ ಗಾಯದ ಮೇಲೆ ಬರೆ ಎಳೆದ ಫೋರ್ಡ್
ರುಪಾಯಿ ಅಪಮೌಲ್ಯ, ಆಮದು ಶುಲ್ಕ ಏರಿಕೆ ಮುಂತಾದ ಅನಿವಾರ್ಯ ಕಾರಣಗಳನ್ನು ಮುಂದಿಟ್ಟಿರುವ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಫೋರ್ಡ್ ಇಂಡಿಯಾ, ತನ್ನೆಲ್ಲ ಆವೃತ್ತಿಗಳಿಗೆ ಶೇಕಡಾ 1ರಿಂದ 5ರಷ್ಟು ದರ ಹೆಚ್ಚಳಗೊಳಿಸಲು ನಿರ್ಧರಿಸಿದೆ.
2013 ಸೆಪ್ಟೆಂಬರ್ 5ರಿಂದಲೇ ನೂತನ ದರ ಜಾರಿಗೆ ಬಂದಿದ್ದು, ಗ್ರಾಹಕರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಫೋರ್ಡ್ ನೂತನ ದರ ಏರಿಕೆಯು ಜನಪ್ರಿಯ ಆವೃತ್ತಿಗಳಾದ ಇಕೊಸ್ಪೋರ್ಟ್, ಫಿಗೊ ಹಾಗೂ ಫಿಯೆಸ್ಟಾ ಸೆಡಾನ್ ಕಾರಿಗಳ ಮೇಲೂ ಪರಿಣಾಮ ಬೀರಲಿದೆ.
ಇತ್ತೀಚೆಗಷ್ಟೇ ಮಾರುಕಟ್ಟೆ ಪ್ರವೇಶಿಸಿದ್ದ ಇಕೊಸ್ಪೋರ್ಟ್ 5.59 ಲಕ್ಷ ರು.ಗಳಿಂದ 9.37 ಲಕ್ಷ ರು.ಗಳ ವರೆಗೆ ಲಭ್ಯವಿದೆ. ಆಮದು ಶುಲ್ಕ ಏರಿಕೆ, ಹಣದುಬ್ಬರ, ಡಾಲರ್ ಎದುರಿಗೆ ರುಪಾಯಿ ಮೌಲ್ಯ ಕುಸಿತ ಕಂಡಿರುವುದು ಬೆಲೆಯೇರಿಕೆಗೆ ಕಾರಣವಾಗಿದೆ ಎಂದು ಫೋರ್ಡ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ಏತನ್ಮಧ್ಯೆ ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಗಳಾದ ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಹಾಗೂ ಅಮೆರಿಕಾದ ಜನರಲ್ ಮೋಟಾರ್ಸ್ ಕೂಡಾ ತನ್ನ ಆವೃತ್ತಿಗಳಿಗೆ ಅನುಕ್ರಮವಾಗಿ ಶೇ. 4.5, ಶೇ. 5 ಹಾಗೂ 10,000 ರು.ಗಳಷ್ಟು ದರ ಏರಿಕೆಗೊಳಿಸಿದೆ.


Click it and Unblock the Notifications









