ಬೆಂಝ್ ಅಗ್ಗದ ಐಷಾರಾಮಿ ಕಾರುಗಳಿಗೆ ಭಾರಿ ಬೇಡಿಕೆ
ಭಾರತೀಯ ಮಾರುಕಟ್ಟೆಗೆ ಅಗ್ಗದ ಎಂಟ್ರಿ ಲೆವೆಲ್ ಐಷಾರಾಮಿ ಕಾರುಗಳನ್ನು ಪರಿಚಯಿಸಿದ್ದ ಮರ್ಸಿಡಿಸ್ ಬೆಂಝ್‌ಗೆ ಭಾರಿ ಬೇಡಿಕೆ ಕಂಡುಬರುತ್ತಿದೆ. ಜರ್ಮನಿಯ ಮೂಲದ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಬೆಂಝ್ ಇದೀಗ ಎ ಹಾಗೂ ಬಿ ಕ್ಲಾಸ್‌ನತ್ತ ಹೆಚ್ಚು ಗಮನ ಕೇಂದ್ರಿತವಾಗಿದ್ದು, ಕಾಂಪಾಕ್ಟ್ ಕಾರುಗಳಿಗೆ ಭಾರತದಲ್ಲಿ ದೊರಕಿರುವ ಅಮೋಘ ಪ್ರತಿಕ್ರಿಯೆಯಿಂದಾಗಿ ಇನ್ನಷ್ಟು ಆವೃತ್ತಿಗಳನ್ನು ಪರಿಚಯಿಸಲು ಯೋಜನೆ ಹೊಂದಿದೆ.
ನಾವು ಬೆಂಝ್ ಎ ಕ್ಲಾಸನ್ನು ಭಾರತದಲ್ಲಿ ಲಾಂಚ್ ಮಾಡಿದ್ದೇವೆ. ಇದುವರೆಗೆ ಭಾರತದಲ್ಲಿ ಬೆಂಝ್ ಕಾಂಪಾಕ್ಟ್ ಕಾರಿಗೆ ಅದ್ಭುತ ಪ್ರತಿಕ್ರಿಯೆ ದೊರಕಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಬೇಡ. ಭಾರತದಲ್ಲಿ ಮಾರಾಟವಾಗುತ್ತಿರುವ 4 ಬೆಂಝ್ ಕಾರುಗಳ ಪೈಕಿ ಒಂದು ಕಾಂಪಾಕ್ಟ್ ಕಾರಾಗಿದೆ ಎಂದು ಮರ್ಸಿಡಿಸ್ ಬೆಂಝ್ ಇಂಡಿಯಾ ನಿರ್ದೇಶಕ ಹಾಗೂ ಸಿಇಒ ಎಬೆರ್‌ಹಾರ್ಡ್ ಕೆರ್ನ್ ತಿಳಿಸಿದ್ದಾರೆ.
ಭಾರತದಲ್ಲಿ ಲಾಂಚ್ ಆದ ಕೇವಲ ನಾಲ್ಕು ದಿನಗಳೊಳಗೆ ಬೆಂಝ್ ಎ ಕ್ಲಾಸ್ 400ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಅದೇ ರೀತಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಗಮನವಾಗಿದ್ದ ಬೆಂಝ್ ಬಿ ಕ್ಲಾಸ್ ಈಗಾಗಲೇ 500ಕ್ಕೂ ಹೆಚ್ಚು ಮಾರಾಟ ಸಂಖ್ಯೆಯನ್ನು ತಲುಪಿದೆ.
ಹಾಗಿದ್ದರೂ ಈ ಎರಡು ಆವೃತ್ತಿಗಳು ಸ್ಥಳೀಯವಾಗಿ ಜೋಡಣೆಯಾಗಲಿದೆಯೇ ಎಂಬುದನ್ನು 2014ರಲ್ಲಷ್ಟೇ ನಿರ್ಧರಿಸಲಿದ್ದೇವೆ ಎಂದು ಬೆಂಝ್ ತಿಳಿಸಿದೆ. ಇದೀಗ ಭಾರತದಿಂದ ಬೇಡಿಕೆ ಪರಿಗಣಿಸಿ ತವರೂರಾದ ಜರ್ಮನಿಯಿಂದ ಹೆಚ್ಚಿನ ಕಾಂಪಾಕ್ಟ್ ಕಾರು ಆಮದು ಮಾಡಿಕೊಳ್ಳಲು ಮಾತೃಸಂಸ್ಥೆಯಲ್ಲಿ ಬೆಂಝ್ ಇಂಡಿಯಾ ವಿನಂತಿಸಿಕೊಂಡಿದೆ.


Click it and Unblock the Notifications
