ಹೊಸ ಅಂಬಾಸಿಡರ್ ಆಗಮನಕ್ಕೆ ಮುಹೂರ್ತ ಫಿಕ್ಸ್
ಭಾರತೀಯ ಆಟೋ ರಂಗದಲ್ಲಿ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿರುವ ಅಂಬಾಸಿಡರ್ ಹೊಸ ಅವತಾರ ಆಗಮನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಹಿಂದೂಸ್ತಾನ್ ಮೋಟಾರ್ಸ್ ಇದನ್ನು ಖಚಿತಪಡಿಸಿದ್ದು, ಆಲ್ ನ್ಯೂ ಬಿಎಸ್-IV ಅಂಬಾಸಿಡರ್ ಜೂನ್ ತಿಂಗಳಾಂತ್ಯದಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿದೆ ಎಂದು ತಿಳಿಸಿದೆ.
2012ನೇ ವರ್ಷ ಹಿಂದೂಸ್ತಾನ್ ಪಾಲಿಗೆ ಅತ್ಯಂತ ಕೆಟ್ಟದ್ದಾಗಿತ್ತು. ಇದೀಗ ನೂತನ ಅಂಬಾಸಿಡರ್ ಮೂಲಕ ಗತಕಾಲದ ವೈಭವ ಮರಳಿ ಪಡೆಯುವ ನಿರೀಕ್ಷೆಯಲ್ಲಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಹಿಂದೂಸ್ತಾನ್ ಮೋಟಾರ್ಸ್ ಭರ್ಜರಿ ಪ್ರಗತಿ ಸಾಧಿಸಿದೆ. ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಅನುಕ್ರಮವಾಗಿ ಶೇಕಡಾ 103.37, 166.5 ಹಾಗೂ ಶೇಕಡಾ 24.33ರಷ್ಟು ಏರಿಕೆ ದಾಖಲಿಸಿದೆ.
ಇದೇ ಸಂದರ್ಭದಲ್ಲಿ ಸಬ್ ಫೋರ್ ಮೀಟರ್ ಕಾರಿನ ಅಭಿವೃದ್ಧಿಯತ್ತವೂ ಹಿಂದೂಸ್ತಾನ್ ಮೋಟಾರ್ಸ್ ಗಮನ ಹರಿಸುತ್ತಿದ್ದು, ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ನಾಲ್ಕು ಮೀಟರ್ ಪರಿಧಿಯೊಳಗೆ ಆಗಮನವಾಗಲಿರುವುದರಿಂದ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ನೆರವಾಗಲಿದೆ. ಬಲ್ಲ ಮೂಲಗಳ ಪ್ರಕಾರ ಇದು ನಾಲ್ಕು ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆ ತಲುಪಲಿದೆ.


Click it and Unblock the Notifications









