ಬ್ರಿಯೊ, ಸಿಟಿ ಮೀರಿಸಿದ ಹೋಂಡಾ ಅಮೇಜ್ ಹೆಚ್ಚು ಜನಪ್ರಿಯ
ಜಪಾನ್ ವಾಹನ ತಯಾರಕ ಸಂಸ್ಥೆಯಾದ ಹೋಂಡಾ, ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಭದ್ರ ನೆಲೆ ಸ್ಥಾಪಿಸಿದೆ. ಇದುವರೆಗೆ ಹೋಂಡಾ ಸಿಟಿ ಹಾಗೂ ಬ್ರಿಯೊ ಹ್ಯಾಚ್‌ಬ್ಯಾಕ್ ಆವೃತ್ತಿಗಳು ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದವು. ಆದರೆ ಇವೆಲ್ಲವನ್ನು ಮೀರಿ ನಿಂತಿರುವ ಇತ್ತೀಚೆಗಷ್ಟೇ ರಂಗ ಪ್ರವೇಶ ಮಾಡಿರುವ ಹೋಂಡಾ ಅಮೇಜ್, ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿದೆ.
ಬ್ರಿಯೊ ಹಾಗೂ ಸಿಟಿ ಜನಪ್ರಿಯತೆಯನ್ನು ಕೊಳ್ಳೆ ಹೊಡೆದಿರುವ ಹೋಂಡಾ ಅಮೇಜ್ ಎಪ್ರಿಲ್ ತಿಂಗಳಲ್ಲಿ ಭರ್ಜರಿ ಮಾರಾಟ ದಾಖಲಿಸಿದೆ. 2013 ಎಪ್ರಿಲ್ ತಿಂಗಳಲ್ಲಿ ಬ್ರಿಯೊ 1628 ಹಾಗೂ ಸಿಟಿ 1917 ಯುನಿಟ್ ಮಾರಾಟವನ್ನು ಕಂಡಿದೆ. ಇವೆರಡನ್ನು ಒಟ್ಟು ಸೇರಿಸಿದರೂ ಅಮೇಜ್ ಮಾರಾಟದ ನಿಕಟ ಬರಲು ಸಾಧ್ಯವಾಗಿಲ್ಲ.
ಈ ಅವಧಿಯಲ್ಲಿ ಹೋಂಡಾ ಅಮೇಜ್ 4852 ಯುನಿಟ್ ಮಾರಾಟ ಮಾಡುವ ಮೂಲಕ ಗಮನ ಸೆಳೆದಿದೆ. ಹೋಂಡಾ ಅಮೇಜ್ ಪ್ರಭಾವದಿಂದಾಗಿ ಮಾರ್ಚ್ ಹಾಗೂ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಸಿಟಿ ಹಾಗೂ ಬ್ರಿಯೊ ಮಾರುಕಟ್ಟೆ ಮತ್ತಷ್ಟು ಕುಸಿದಿದೆ. ಮಾರ್ಚ್ ತಿಂಗಳಲ್ಲಿ ಸಿಟಿ 2916 ಹಾಗೂ ಬ್ರಿಯೊ 3271 ಯುನಿಟ್ ಮಾರಾಟವಾಗಿದ್ದವು.
ಅಮೇಜ್ ಹೋಂಡಾದಿಂದ ದೇಶಕ್ಕೆ ಪರಿಚಯವಾಗಿರುವ ಮೊದಲ ಡೀಸೆಲ್ ಕಾರಾಗಿದೆ. ಪ್ರಮುಖವಾಗಿ ದೇಶದ ನಂ.1 ಕಾರು ಸಂಸ್ಥೆಯಾದ ಮಾರುತಿ ಸುಜುಕಿಯ ಸ್ವಿಫ್ಟ್ ಡಿಜೈರ್ ಆವೃತ್ತಿಗೆ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿದೆ.


Click it and Unblock the Notifications









