ಇನ್ನು ಮಂಗಳೂರಿನಿಂದ ಕಾಸರಗೋಡು ಪಯಣ ಅಗ್ಗ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಇದೇ ಮೊದಲ ಬಾರಿಗೆ ನೂತನ ಅಂತರಾಜ್ಯ ಮಾಸಿಕ ಬಸ್ ಪಾಸ್ ಪರಿಚಯಿಸುತ್ತಿದ್ದು, ಇದರಂತೆ ಇನ್ನು ಮುಂದೆ ಮಂಗಳೂರಿನಿಂದ ಕಾಸರಗೋಡು ಪಯಣ ದರ ಅಗ್ಗವಾಗಲಿದೆ.
ಕೆಎಸ್‌ಆರ್‌ಟಿಸಿಯ ಮಂಗಳೂರು ಡಿವಿಷನ್ ಈ ವಿನೂತನ ಯೋಜನೆಯನ್ನು ಜನಸಾಮಾನ್ಯರ ಮುಂದಿಡುತ್ತಿದೆ. ಇದರಂತೆ ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಪಯಣಿಸುವ ದೈನಂದಿನ ಪ್ರಯಾಣಿಕರಿಗೆ ರಿಯಾಯಿತಿ ದರ ದೊರಕಲಿದೆ.
ನೂತನ ಅಂತರಾಜ್ಯ ಮಾಸಿಕ ಪಾಸ್ ಯೋಜನೆಯಂತೆ ಪ್ರಯಾಣಿಕರು ತಿಂಗಳಲ್ಲಿ 20 ದಿನಗಳ ಪ್ರಯಾಣ ದರವನ್ನು ಪಾವತಿಸಿದರೆ ಸಾಕು. ಈ ಮುಖಾಂತರ 10 ದಿನಗಳ ಉಚಿತ ಪ್ರಯಾಣವನ್ನು ಪಡೆಯಬಹುದಾಗಿದೆ. ಸದ್ಯ ಮಂಗಳೂರಿನಿಂದ ಕಾಸಗೋಡಿಗೆ ಪ್ರಯಾಣಿಸುವವರಿಗೆ 2,580 ರು. ವೆಚ್ಚ ತಗಲುತ್ತದೆ. ಅಂದರೆ ನೂತನ ಅಂತರಾಜ್ಯ ಮಾಸಿಕ ಪಾಸ್ ಯೋಜನೆಯಂತೆ ರು. 860 ಉಳಿತಾಯ ಮಾಡಬಹುದು. ಅಂದರೆ ಮಾಸಿಕ ಪಾಸ್ 1,720 ರು.ಗಳಿಗೆ ನಿಮಗೆ ದೊರಕಲಿದೆ.
ಪ್ರಸ್ತುತ ಸೇವೆಯು ಕಾಸರಗೋಡಿನ ಇತರ ಭಾಗಗಳಾದ ತಲಪ್ಪಾಡಿ, ಮಂಜೇಶ್ವರ ಹಾಗೂ ಕುಂಬ್ಲೆಗೂ ಲಭ್ಯವಿದೆ. ಇದರ ಜತೆಗೆ ಮಾಸಿಕ ಪಾಸ್ ಗುರುತು ಚೀಟಿಗಾಗಿ ಹೆಚ್ಚುವರಿ 50 ರು. ಪಾವತಿಸಬೇಕಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೆಎಸ್‌ಆರ್‌ಟಿಸಿ ಪ್ರತಿನಿತ್ಯ ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಒಟ್ಟು 264 ಸರ್ವಿಸ್‌ಗಳನ್ನು ನಡೆಸುತ್ತಿದ್ದು, ಪ್ರತಿ ಮೂರು ನಿಮಿಷಕ್ಕೂ ಒಂದು ಬಸ್ ಪ್ರಯಾಣ ಬೆಳೆಸುತ್ತಿದೆ.


Click it and Unblock the Notifications









