ಬೆಂಗ್ಳೂರಿಗರಿಗೆ ಎಲೆಕ್ಟ್ರಿಕ್ ಕಾರು ಮೇಲೆ ಪ್ರೀತಿ ಜಾಸ್ತಿನಾ?
ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ನಮ್ಮ ಬೆಂಗ್ಳೂರಿಗರು ಸದಾ ಒಂದು ಹೆಜ್ಜೆ ಮುಂದಿರುತ್ತಾರೆ. ಯಾಕೆ ಈ ರೀತಿ ಹೇಳುತ್ತಿದ್ದೇವೆ ಅಂದರೆ ಇಡೀ ಭಾರತದ ಪೈಕಿ ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ವಿದ್ಯುತ್ ಚಾಲಿತ ವಾಹನಗಳಿವೆ ಎಂಬುದು ಈಗಿನ ಬ್ರೇಕಿಂಗ್ ನ್ಯೂಸ್.
ಬಿಡುವಿಲ್ಲದ ವಾಹನ ದಟ್ಟಣೆಯಿಂದ ಪಾರಾಗಲು ಹಾಗೂ ಉದ್ಯಾನ ನಗರಿಯನ್ನು ಇನ್ನಷ್ಟು ಸ್ವಚ್ಛವಾಗಿರಿಸಲು ಈಗಾಗಲೇ ಪಣತೊಟ್ಟಿರುವ ಮಹೀಂದ್ರ ರೇವಾ, ಮಾರ್ಚ್ 18ರಂದು ಎಲೆಕ್ಟ್ರಿಕ್ ಕಾರು 'ಇ2ಒ' ಲಾಂಚ್ ಮಾಡುವುದಾಗಿ ಘೋಷಿಸಿದೆ.
ಇದಕ್ಕೆ ಮುನ್ನುಡಿಯೆಂಬಂತೆ ನಗರದ್ಯಾಂತ 100 ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ತೆರೆಯಲಾಗಿದೆ. ಮಹೀಂದ್ರವು, ಚಾರ್ಜಿಂಗ್ ಪಾಯಿಂಟ್ ಮೂಲಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಗೋಪಾಲನ್ ಮಾಲ್ ಜತೆ ಪಾಲುದಾರಿಕೆ ಕೂಡಾ ಮಾಡಿಕೊಂಡಿದೆ.
ಇದರಂತೆ ಹಳೆಯ ಮದ್ರಾಸ್ ರಸ್ತೆಯಲ್ಲಿರುವ ಗೋಪಾಲನ್ ಮಾಲ್‌ನಲ್ಲಿ ಮೊದಲ ಚಾರ್ಜಿಂಗ್ ಪಾಯಿಂಟನ್ನು ಮಾರ್ಚ್ 06, ಬುಧವಾರದಂದು ಉದ್ಘಾಟಿಸಲಾಯಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳು, ಆಟೋಮೋಟಿವ್ ಗ್ಯಾರೇಜ್ ಹಾಗೂ ಎಂ ಆಂಡ್ ಎಂಡ್ ಡೀಲರ್‌ಶಿಪ್‌ಗಳಲ್ಲೂ ಇತರ ಚಾರ್ಜಿಂಗ್ ಪಾಯಿಂಟ್‌ಗಳನ್ನು ಲಗತ್ತಿಸಲಾಗಿದೆ.
ಈ ಮೂಲಕ ಗ್ರಾಹಕರಿಗೆ ಪ್ರತಿ ಐದು ಕೀಲೋ ಮೀಟರ್‌ನೊಳಗೆ ಒಂದು ಚಾರ್ಜಿಂಗ್ ಸ್ಟೇಷನ್ ಮೂಲಸೌಕರ್ಯ ನೀಡುವುದು ಮಹೀಂದ್ರ ಗುರಿಯಾಗಿದೆ.
ಟ್ವಿಟರ್‌ನಲ್ಲಿ ನಮ್ಮನ್ನು ಫಾಲೊ ಮಾಡಿ

ಈ ಸಂದರ್ಭದಲ್ಲಿ ಮಾತನಾಡಿದ ಮಹೀಂದ್ರ ರೇವಾ ಎಲೆಕ್ಟ್ರಿಕ್ ವೆಹಿಕಲ್ ಪ್ರೈವೇಟ್ ವೆಹಿಕಲ್ ಯೋಜನಾ ಹಾಗೂ ತಂತ್ರಜ್ಞಾನ ಮುಖ್ಯಸ್ಥ ಚೇತನ್ ಮೈನಿ, ದೇಶದೆಲ್ಲೆಡೆ ವಿದ್ಯುತ್ ಚಾಲಿತ ವಾಹನಗಳಿಗೆ ವಿಶೇಷವಾಗಿಯೂ ಮೆಟ್ರೋಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ ಎಂದಿದ್ದಾರೆ.

ಶಾಪಿಂಗ್ ಮಾಲ್‌ಗಳಲ್ಲಿ ಚಾರ್ಜಿಂಗ್ ಪಾಯಿಂಟ್ ತೆರೆಯುವುದು ಗ್ರಾಹಕರಿಗೆ ನೆರವು ಮಾಡಲಿದೆ ಎಂದು ಮಹೀಂದ್ರ ರೇವಾ ಎಲೆಕ್ಟ್ರಿಕ್ ವೆಹಿಕಲ್ ಪ್ರೈವೇಟ್ ಲಿಮಿಟೆಡ್ ಕಾರ್ಯನಿರ್ವಹಣೆ ಮುಖ್ಯಸ್ಥ ಆರ್. ಚಂದ್ರಮೌಲಿ ತಿಳಿಸಿದ್ದಾರೆ.

ಹಾಗೆಯೇ ಮಹೀಂದ್ರ ಗ್ರೂಪ್ ಜತೆ ಪಾಲುದಾರಿಕೆ ಗಿಟ್ಟಿಸಿಕೊಂಡಿರುವುದಕ್ಕೆ ಗೋಪಾಲನ್ ಮಾಲ್ ನಿರ್ದೇಶಕರಾಗಿರುವ ಸಿ. ಪ್ರಭಾಕರ್ ಕೂಡಾ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಬಹುನಿರೀಕ್ಷಿತ ಮಹೀಂದ್ರ ರೇವಾ 'ಇ2ಒ' ಮಾರ್ಚ್ 18ರಂದು ಬಿಡುಗಡೆಯಾಗಲಿದೆ.

ಹಾಗಿದ್ದಾರೆ ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








