ಡಸ್ಟರ್ ಹಿಂದಿಕ್ಕಿದ ಸ್ಕಾರ್ಪಿಯೊ ಜೈತ್ರಯಾತ್ರೆ ಮುಂದುವರಿಕೆ
ಮಾರುಕಟ್ಟೆಗೆ ತನ್ನ ಎದುರಾಳಿಯಾಗಿ ಯಾವ ಕಾರು ಬೇಕಾದರೂ ಎಂಟ್ರಿ ಕೊಡುತ್ತಿರಬಹುದು. ಆದರೆ ತನ್ನನ್ನು ಮೀರಿಸಲು ಮಾತ್ರ ಯಾರಿಂದಲೂ ಸಾಧ್ಯವಿಲ್ಲ. ಅಂತದ್ದರ ಯಶಸ್ಸು ಕೇವಲ ಸೀಮಿತ ಅವಧಿಗಳಿಗೆ ಮಾತ್ರ ಎಂಬುದನ್ನು ಮಗದೊಮ್ಮೆ ಸಾಬೀತುಪಡಿಸಿರುವ ಐಕಾನ್ ಸ್ಕಾರ್ಪಿಯೊ, ಆಗಸ್ಟ್ ತಿಂಗಳ ಮಾರಾಟದಲ್ಲೂ ತನ್ನ ಪ್ರತಿಸ್ಪರ್ಧಿ ಡಸ್ಟರ್ ಮೀರಿಸುವ ಮೂಲಕ ಗಮನಸೆಳೆದಿದೆ.
ಈ ಮೂಲಕ ಸತತ ಎರಡನೇ ತಿಂಗಳ ಮಾರಾಟದಲ್ಲೂ ಡಸ್ಟರ್ ಹಿಂದಿಕ್ಕುವಲ್ಲಿ ಮಹೀಂದ್ರ ಸ್ಕಾರ್ಪಿಯೊ ಯಶಸ್ವಿಯಾಗಿದೆ. ಕಳೆದ ವರ್ಷ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದ ರೆನೊ ಡಸ್ಟರ್ ಮಾರಾಟದಲ್ಲಿ ಭಾರಿ ಪ್ರಗತಿ ಸಾಧಿಸಿತ್ತು. ಆದರೆ ಮಾರುಕಟ್ಟೆಯಲ್ಲಿ ಇಕೊಸ್ಪೋರ್ಟ್‌ಗಳಂತಹ ಪ್ರತಿಸ್ಪರ್ಧಿಗಳ ಸಂಖ್ಯೆ ಹೆಚ್ಚಾಗತೊಡಗಿದ ಬಳಿಕ ಹಿನ್ನಡೆ ಅನುಭವಿಸುತ್ತಿದೆ.

ನಿಮ್ಮ ಮಾಹಿತಿಗಾಗಿ, 2002ನೇ ಇಸವಿಯಲ್ಲಿ ಮೊದಲ ಬಾರಿಗೆ ಲಾಂಚ್ ಆಗಿದ್ದ ಸ್ಕಾರ್ಪಿಯೊ ಒಂದು ದಶಕ ಕಳೆದರೂ ತನ್ನ ಬೇಡಿಕೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನೊಂದೆಡೆ ಡಸ್ಟರ್ ಕಳೆದ ವರ್ಷವಷ್ಟೇ ದೇಶದ ಮಾರುಕಟ್ಟೆಗೆ ಪ್ರವೇಶಿಸಿತ್ತು.
ಆಗಸ್ಟ್ ತಿಂಗಳಲ್ಲಿ ಡಸ್ಟರ್ ಮಾರಾಟ ಸಂಖ್ಯೆ 2,967 ಯುನಿಟ್‌ಗಳಿಗೆ ಮಾತ್ರ ಸೀಮಿತಗೊಂಡಿದೆ. ಇನ್ನೊಂದೆಡೆ ಸ್ಕಾರ್ಪಿಯೊ 3,356 ಯುನಿಟ್ ದಾಖಲಿಸುವ ಮೂಲಕ ಇನ್ನೊಮ್ಮೆ ಮಿಂಚಿಂಗ್ ನಡೆಸಿದೆ. ಹಾಗೆಯೇ ಜುಲೈ ತಿಂಗಳಲ್ಲೂ ಡಸ್ಟರ್‌ನ 3,089 ಯುನಿಟ್‌ಗಳಿಗೆ ವಿರುದ್ಧವಾಗಿ ಸ್ಕಾರ್ಪಿಯೊ 3,256 ಯುನಿಟ್‌ಗಳನ್ನು ಮಾರಾಟ ಮಾಡಿವೆ.
ಹಾಗಿದ್ದರೂ 2013ನೇ ಸಾಲಿನ ಒಟ್ಟು ಮಾರಾಟ ಪರಿಗಣಿಸಿದಾಗ ಸ್ವಲ್ಪದರಲ್ಲೇ ಡಸ್ಟರ್ ಮೀರಿಸುವಲ್ಲಿ ಸ್ಕಾರ್ಪಿಯೊ ವೈಫಲ್ಯತೆಯನ್ನು ಅನುಭವಿಸಿದೆ. 2013 ಜನವರಿಯಿಂದ ಆಗಸ್ಟ್ ತಿಂಗಳ ವರೆಗೆ ಡಸ್ಟರ್ 36,545 ಯುನಿಟ್ ಮಾರಾಟ ಗಿಟ್ಟಿಸಿಕೊಂಡಿದ್ದರೆ ಸ್ಕಾರ್ಪಿಯೊ 32,867 ಯುನಿಟ್‌ಗಳಿಗೆ ಮಾತ್ರ ಸೀಮಿತಗೊಂಡಿದೆ.


Click it and Unblock the Notifications









