ಇದೀಗ ಅಧಿಕೃತ; ಡಸ್ಟರ್ ಅಲ್ಲ ನಿಸ್ಸಾನ್ ಟೆರನೊ ಆಗಮನಕ್ಕೆ ರೆಡಿ
ಕೆಲವು ದಿನಗಳ ಹಿಂದೆಯಷ್ಟೇ ನಾವು ನಿಸ್ಸಾನ್ ನೂತನ ಎಸ್‌ಯುವಿ ಕಾರು ಭಾರತಕ್ಕೆ ಆಗಮನವಾಗುವುದರ ಬಗ್ಗೆ ವರದಿಯೊಂದನ್ನು ಬರೆದಿದ್ದೆವು. ಇದೀಗ ಎಲ್ಲವೂ ಅಧಿಕೃತವಾಗಿದ್ದು, ನಿಸ್ಸಾನ್‌ನಿಂದ ಆಗಮನವಾಗಲಿರುವ ಡಸ್ಟರ್ ಬ್ರಾಂಡ್ ಟೆರನೊ (Terrano) ಎಂದು ಹೆಸರಿಸಲ್ಪಡಲಿದೆ.
ಈ ಮೂಲಕ ನಿಸ್ಸಾನ್ ಬ್ಯಾಡ್ಜ್‌ನಲ್ಲಿ ಡಸ್ಟರ್ ಮತ್ತೆ ದೇಶಕ್ಕೆ ಪ್ರವೇಶ ಪಡೆಯಲಿದೆ. ಇದು ರೆನೊ ಡಸ್ಟರ್‌ಗಿಂತ ಹೇಗೆ ಭಿನ್ನವಾಗಿರಲಿದೆ ಎಂಬುದು ಮುಂದಿನ ದಿನಗಳಲ್ಲಿ ಮಾಹಿತಿ ಲಭಿಸಲಿದೆ. ಇನ್ನು ಸ್ಪರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಲು ಯಶಸ್ವಿಯಾದರೆ ಟೆರೆನೊ ಆವೃತ್ತಿಗೆ ದೇಶದಲ್ಲಿ ಧೂಳೆಬ್ಬಿಸಲು ಸಾಧ್ಯವಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ದೇಶದಲ್ಲಿ ಡಸ್ಟರ್ ಸಾಧಿಸಿರುವ ಯಶಸ್ಸೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.
ಪ್ರೀಮಿಯಂ ಎಸ್‌ಯುವಿ...
ಅಂದ ಹಾಗೆ ಕಂಪನಿಯು ಈಗಾಗಲೇ ನಿಸ್ಸಾನ್ ಟೆರನೊ ಪ್ರೀಮಿಯಂ ಎಸ್‌ಯುವಿ ಎಂಬುದನ್ನು ಖಚಿತಪಡಿಸಿದೆ. ಹಾಗೆಯೇ ಬೇಸ್ ವೆರಿಯಂಟ್ 12ರಿಂದ 15 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಹಾಗೆಯೇ ಟಾಪ್ ಎಂಡ್ ವೆರಿಯಂಟ್ ದರವು 20 ಲಕ್ಷ ರು.ಗಳ ವರೆಗೂ ತಲುಪುವ ಸಾಧ್ಯತೆಯಿದೆ. ಹಾಗಾಗಿ ರೆನೊ ಡಸ್ಟರ್‌ಗೆ ಸ್ಪರ್ದೆ ಒಡ್ಡುವ ಸಾಧ್ಯತೆ ಕಡಿಮೆಯಾಗಿದೆ.
ಎಂಜಿನ್...
ಏತನ್ಮಧ್ಯೆ ನಿಸ್ಸಾನ್ ಟೆರನೊ ಪವರ್‌ಫುಲ್ ಎಂಜಿನ್ ಹೊಂದಿರಲಿದೆ. ಇದರಲ್ಲಿ ಟರ್ಬೊಚಾರ್ಜ್ಡ್ 2.0 ಲೀಟರ್ ಡೀಸೆಲ್ ಎಂಜಿನ್ ಹಾಗೂ ರೆನೊ 1.5 ಲೀಟರ್ ಡೀಸೆಲ್ ಎಂಜಿನ್ ನಿರೀಕ್ಷಿಸಬಹುದಾಗಿದೆ.
1990ರಲ್ಲಿ ಟೆರನೊ...
ಈ ಹಿಂದೆ 1990ರ ದಶಕದಲ್ಲಿ ನಿಸ್ಸಾನ್ ಟೆರನೊ ಮಾರುಕಟ್ಟೆಯಲ್ಲಿತ್ತು. ಆದರೆ ಆ ಬಳಿಕ ಕಾರಣಾಂತರಗಳಿಂದಾಗಿ ಹಿಂಪಡೆಯಲಾಗಿತ್ತು. ಇದೀಗ ಮತ್ತದೇ ಟೆರನೊ ಬ್ಯಾಡ್ಜ್‌ನೊಂದಿಗೆ ಹೊಸ ಎಸ್‌ಯುವಿ ಕಾರು ಆಗಮನಕ್ಕೆ ಸಿದ್ಧವಾಗುತ್ತಿದೆ.


Click it and Unblock the Notifications









