ಇದೀಗ ಅಧಿಕೃತ; ನೂತನ ಸೆಗ್ಮೆಂಟ್ ವಾಹನ - ಕ್ವಾಡ್ರಾಸೈಕಲ್
ಇದೀಗ ಎಲ್ಲವೂ ಅಧಿಕೃತಗೊಂಡಿದ್ದು, ನಾಲ್ಕು ಚಕ್ರಗಳ ಕ್ವಾಡ್ರಾಸೈಕಲ್ ವಿಭಾಗವು ನೂತನ ಸೆಗ್ಮೆಂಟ್ ವಾಹನಗಳ ಪಟ್ಟಿಯಲ್ಲಿ ಗುರುತಿಸಿಕೊಳ್ಳಲಿದೆ ಎಂಬುದನ್ನು ಸರಕಾರ ಘೋಷಿಸಿದೆ.
ಆಟೋರಿಕ್ಷಾಗಳಿಗೆ ಬದಲಿ ವ್ಯವಸ್ಥೆ - ಬಜಾಜ್ ಆರ್‌ಇ60
ಹಲವಾರು ತಿಂಗಳುಗಳ ಅಧ್ಯಯನದ ಬಳಿಕ ತಜ್ಞರು ಹಾಗೂ ಸಾರ್ವಜನಿಕರಿಂದ ಲಭಿಸಿದ ಅಭಿಪ್ರಾಯದ ಬಳಿಕ ಸರಕಾರ ಇಂತಹದೊಂದು ನಿರ್ಧಾರಕ್ಕೆ ಬಂದಿದೆ. ಈ ಮೂಲಕ ಕ್ವಾಡ್ರಾಸೈಕಲ್ ವಿಭಾಗಕ್ಕೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಂಗೀಕಾರ ನೀಡಿದೆ. ಇದರಂತೆ ನಗರ ಪ್ರದೇಶದ ಸಾರ್ವಜನಿಕ ಸಾರಿಗೆ ಮತ್ತು ವಾಣಿಜ್ಯ ವಾಹನಗಳಾಗಿ ಇದನ್ನು ಬಳಕೆ ಮಾಡಬಹುದಾಗಿದೆ.

ಮೂರು ಚಕ್ರಗಳಿಗೆ ಹೋಲಿಸಿದರೆ ನಾಲ್ಕು ಚಕ್ರಗಳ ಕ್ವಾಡ್ರಾಸೈಕಲ್ ಹೆಚ್ಚು ಸುರಕ್ಷಿತವಾದ ಪಯಣವನ್ನು ನೀಡಲಿದೆ. ಹಾಗೆಯೇ ಇತರೆಲ್ಲ ವಾಹನಗಳಂತೆ ಇದು ಕೂಡಾ ಬ್ಯಾಟರಿ ಹಾಗೂ ವಿದ್ಯುತ್ ಚಾಲಿತ ವಾಹನವಾಗಿರಲಿದೆ.

ಇನ್ನಿತರ ನಿಬಂಧನೆಗಳು:
- ಕ್ವಾಡ್ರಾಸೈಕಲ್ ಪ್ರಯಾಣಿಕ ವಾಹನಗಳು 450ಕೆ.ಜಿಗಿಂತಲೂ ಹೆಚ್ಚು ತೂಕ ಇರಕೂಡದು.
- ಹಾಗೆಯೇ 3 ಮೀಟರ್‌ಗಿಂತಲೂ ಹೆಚ್ಚು ಉದ್ದವಿರಬಾರದು.
- ಅದೇ ಹೊತ್ತಿಗೆ ವಾಣಿಜ್ಯ ಆವೃತ್ತಿಗಳು 550 ಕೆ.ಜಿ ಹಾಗೂ 3.7 ಮೀಟರ್ ಉದ್ದ ಪರಿಮಿತಿಯನ್ನು ಹೊಂದಿರಬೇಕು.
- ಹಾಗೆಯೇ ಇದರಲ್ಲಿ ಚಾಲಕ ಸೇರಿದಂತೆ ನಾಲ್ಕು ಪ್ರಯಾಣಿಕರಿಗೆ ಮಾತ್ರ ಸಂಚರಿಸಬಹುದಾಗಿದೆ.

ಇಷ್ಟೆಲ್ಲ ಆದರೂ ಯಾವುದೇ ಕಾರಣಕ್ಕೂ ಇಂತಹ ವಾಹನಗಳನ್ನು ವೈಯಕ್ತಿಕ ಬಳಕೆಗಾಗಿ ಬಳಸಬಾರದು. ಒಟ್ಟಾರೆಯಾಗಿ ಕ್ವಾಡ್ರಾಸೈಕಲ್ ನಗರ ಪ್ರದೇಶದಲ್ಲಿ ಆಟೋ ರಿಕ್ಷಾಗಳಿಗೆ ಪರಿಪೂರ್ಣ ಬದಲಿ ವ್ಯವಸ್ಥೆ ಎನಿಸಿಕೊಳ್ಳಲಿದೆ.

ಪ್ರಸ್ತುತ ಸರಕಾರದ ಅಂತಿಮ ಅಧಿಸೂಚನೆ ಮುಂದಿನ ಒಂದು ತಿಂಗಳೊಳಗೆ ಘೋಷಣೆಯಾಗಲಿದ್ದು, ಆರು ತಿಂಗಳುಗಳ ಬಳಿಕ ಅಂದರೆ 2014ರ ಮಧ್ಯಂತರ ಅವಧಿಯಲ್ಲಿ ಕ್ವಾಡ್ರಾಸೈಕಲ್ ವಾಹನಗಳನ್ನು ರಸ್ತೆಯಲ್ಲಿ ನೋಡಬಹುದಾಗಿದೆ.

ಅಂದ ಹಾಗೆ ದೇಶದಲ್ಲಿ ಕ್ವಾಡ್ರಾಸೈಕಲ್ ವಿಭಾಗದ ವಾಹನವನ್ನು ತಯಾರಿಸಿದ ಮೊದಲ ಸಂಸ್ಥೆಯೆಂಬ ಹೆಗ್ಗಳಿಕೆಗೆ ಬಜಾಜ್ ಪಾತ್ರವಾಗಿದೆ. ಬಜಾಜ್‌ನ ಆರ್‌ಇ60 ಈಗಾಗಲೇ ನಿರ್ಮಾಣ ಹಂತದಲ್ಲಿದೆ.

ಇದನ್ನು ಟಿವಿಎಸ್, ಟಾಟಾ ಮೋಟಾರ್ಸ್, ಮಾರುತಿ ಸುಜುಕಿ ಮತ್ತು ಪಿಯಾಜಿಯೊ ಹಿಂಬಾಸಲಿದೆ. ಏತನ್ಮಧ್ಯೆ ವಿದ್ಯುತ್ ಚಾಲಿತ ಕ್ವಾಡ್ರಾಸೈಕಲ್ ವಾಹನ ಲಾಂಚ್ ಮಾಡಲು ಮಹೀಂದ್ರ ಆಂಡ್ ಮಹೀಂದ್ರ ಕೂಡಾ ಯೋಜನೆ ಇರಿಸಿಕೊಂಡಿದೆ.


Click it and Unblock the Notifications








