ಫೋರ್ಡ್ ಫ್ಯೂಶನ್ ಲೈಟ್‌ವೇಟ್ ಕಾನ್ಸೆಪ್ಟ್
ನಿಮಗೆಲ್ಲರಿಗೂ ತಿಳಿದಿರುವಂತೆಯೇ ವಾಹನಗಳ ಭಾರ ಕಡಿಮೆಗೊಳಿಸುವುದರ ಮೂಲಕ ಹೆಚ್ಚಿನ ಇಂಧನ ಕ್ಷಮತೆ ಪಡೆಯಬಹುದಾಗಿದೆ. ಇದು ಕೇವಲ ಮೈಲೇಜ್ ವಿಚಾರದಲ್ಲಿ ಮಾತ್ರವಲ್ಲ; ಹಗುರ ಭಾರದ ಕಾರುಗಳನ್ನು ಸುಲಭವಾಗಿ ಹ್ಯಾಂಡಲ್ ಮಾಡುವುದರಲ್ಲಿ ಹಾಗೆಯೇ ಗರಿಷ್ಠ ನಿರ್ವಹಣೆ ನೀಡುವಲ್ಲಿ ನೆರವಾಗುತ್ತದೆ.
ಇಂತಹ ತಂತ್ರಗಾರಿಕೆಯನ್ನು ಅನಸರಿಸಲು ಸೂಪರ್ ಕಾರು ತಯಾರಕರು ಸದಾ ಕಾರ್ಯಮಗ್ನವಾಗಿರುತ್ತಾರೆ. ಇದೇ ಕಾರಣಕ್ಕಾಗಿ ಸೂಪರ್ ಕಾರುಗಳು ಹೆಚ್ಚು ದುಬಾರಿ ಕೂಡಾ ಎನಿಸಿಕೊಂಡಿದೆ. ಸದ್ಯ ಇದೇ ತತ್ವಶಾಸ್ತ್ರವನ್ನು ಅನುಸರಿಸಲು ಮುಂದಾಗಿರುವ ಅಮೆರಿಕ ಮೂಲದ ಫೋರ್ಡ್ ಸಹ ಅಲ್ಟ್ರಾ ಲೈಟ್ ಫ್ಯೂಶನ್ ಕಾನ್ಸೆಪ್ಟ್ ಸೆಡಾನ್ ಕಾರನ್ನು ಅಭಿವೃದ್ಧಿಪಡಿಸುತ್ತಿದೆ.

ಹಗುರವಾದರೂ ಫೋರ್ಡ್ ಲೈಟ್ ವೈಟ್ ಕಾನ್ಸೆಪ್ಟ್ ಹೆಚ್ಚು ಶಕ್ತಿಯುತವೆನಿಸಿದೆ. ಇದು ಸಾಮಾನ್ಯ ಫ್ಯೂಶನ್ ಸೆಡಾನ್ ಕಾರಿಗಿಂತಲೂ ಬರೋಬ್ಬರಿ 362 ಕೆ.ಜಿ.ಗಳಷ್ಟು ಹಗುರ ಭಾರವಾಗಿದೆ. ಈ ಮೂಲಕ ಒಟ್ಟು ಭಾರದಲ್ಲಿ ಶೇಕಡಾ 25ರಷ್ಟು ತೂಕ ಇಳಿಕೆಗೊಳಿಸಿರುವ ಫೋರ್ಡ್, ತನ್ನ ಅತ್ಯಂತ ಸಣ್ಣ ಫಿಯೆಸ್ಟಾ ಹ್ಯಾಚ್‌ಬ್ಯಾಕ್‌ಗೆ ಸಮಾನವಾದ ಭಾರವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಫೋರ್ಡ್ ಜಿಟಿ ಸೂಪರ್ ಕಾರುಗಳನ್ನು ಉತ್ಪಾದಿಸುವ ವಿಭಾಗವು ಇದನ್ನು ಅಭಿವೃದ್ಧಿಪಡಿಸಿದೆ. ಇದೇ ವಿಭಾಗವು 2015 ಫೋರ್ಡ್ ಎಫ್150 ಪಿಕಪ್ ಟ್ರಕ್ಕನ್ನು ಸಹ ಅಭಿವೃದ್ಧಿಪಡಿಸಿತ್ತು. ಇದು ಹಿಂದಿನ ತಲೆಮಾರಿನ ವಾಹನಗಿಂತಲೂ 317 ಕೆ.ಜಿಗಳಷ್ಟು ಹಗುರ ಭಾರವಾಗಿದೆ.
ಅಸಂಪ್ರಾದಾಯಿಕ ವಸ್ತುಗಳ ಬಳಕೆಯಿಂದಲೇ ಭಾರದಲ್ಲಿ ಗಣನೀಯವಾದ ಇಳಿಕೆ ಮಾಡಲು ಸಹಕಾರಿಯಾಗಿದೆ. ಉದಾಹರಣೆಗಾಗಿ ಫ್ಯೂಶನ್ ಕಾನ್ಸೆಪ್ಟ್‌ನಲ್ಲಿರುವ ಚಕ್ರಗಳು ಸಂಪೂರ್ಣವಾಗಿ ಕಾರ್ಬನ್ ಫೈರ್ ಆಗಿದ್ದು, ಸಾಮಾನ್ಯ ಆವೃತ್ತಿಗಿಂತಲೂ ತುಂಬಾನೇ ಹಗುರವೆನಿಸಿದೆ.
ಹಾಗೆಯೇ ದೇಹ ಭಾಗಗಳಿಗೆ ಗಟ್ಟಿಮುಟ್ಟಾದ ಸ್ಟೀಲ್ ಹಾಗೂ ಮ್ಯಾಗ್ನೇಶಿಯಂಗಳನ್ನು ಬಳಕೆ ಮಾಡಲಾಗಿದೆ. ಅದೇ ರೀತಿ ಗೋರಿಲ್ಲಾ ಗ್ಲಾಸ್ ಹಾಗೂ ಹಿಂದುಗಡೆ ಪ್ಲಾಸ್ಟಿಕ್ ಗಾಜು ಬಳಕೆ ಮಾಡಲಾಗಿದೆ. ಅಂದ ಹಾಗೆ ಫ್ಯೂಶನ್ ಕಾನ್ಸೆಪ್ಟ್ 3 ಸಿಲಿಂಡರ್ ಇಕೊಬೂಸ್ಟ್ ಎಂಜಿನ್ ಪಡೆದುಕೊಂಡಿದೆ.


Click it and Unblock the Notifications








