ಅಂಬಾಸಿಡರ್ ನಿಲುಗಡೆ; ಇತರ ಕಾರುಗಳತ್ತ ವಾಲಿದ ಸರಕಾರ
ಕೆಲವು ತಿಂಗಳುಗಳ ಹಿಂದೆಯಷ್ಟೇ ಐಕಾನಿಕ್ ಅಂಬಾಸಿಡರ್ ಕಾರಿನ ಉತ್ಪಾದನೆಯನ್ನು ಹಿಂದೂಸ್ತಾನ್ ಮೋಟಾರ್ಸ್ ಸ್ಥಗಿತಗೊಳಿಸಿತ್ತು. ಇದರಿಂದಾಗಿ ಅಂಬಿಯನ್ನೇ ನೆಚ್ಚಿಕೊಂಡಿದ್ದ ಸರಕಾರಕ್ಕೆ ಹಿನ್ನಡೆಯುಂಟಾಗಿತ್ತು.
ಸರಕಾರದ ಅಧಿಕೃತ ಪ್ರಯಾಣ ಅಗತ್ಯಗಳಿಗಾಗಿ ದಶಕದಿಂದಲೂ ಅಂಬಾಸಿಡರ್ ಕಾರನ್ನು ಬಳಕೆ ಮಾಡಲಾಗುತ್ತಿತ್ತು. ಅಲ್ಲದೆ ಬಹುತೇಕ ಹಿರಿಯ ರಾಜಕಾರಣಿಗಳ ನೆಚ್ಚಿನ ಕಾರೆಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

ಆದರೆ ಇದೀಗ ಅಂಬಾಸಿಡರ್ ಉತ್ಪಾದನೆ ನಿಲುಗಡೆಗೊಂಡಿರುವುದರಿಂದ ಇತರ ವಾಹನಗಳನ್ನು ಆಯ್ಕೆ ಮಾಡುವುದಕ್ಕೆ ಸರಕಾರ ಹಸಿರು ನಿಶಾನೆ ನೀಡಿದೆ. ಈ ಸಂಬಂಧ ಹಣಕಾಸು ಸಚಿವಾಲಯವು ಹೊಸ ಕಾರು ಖರೀದಿಗೆ ಸೂಚನೆ ನೀಡಿದೆ. ಆದರೆ ಇದು ಕೆಲವೊಂದು ನಿಂಬಧನೆಗಳನ್ನು ಒಳಗೊಂಡಿರಲಿದ್ದು, ಇವುಗಳಲ್ಲಿ 4.75 ಲಕ್ಷ ರು.ಗಳ ಬಜೆಟ್ ಮೌಲ್ಯ ಅಂತೆಯೇ ನಿರ್ವಹಣಾ ವೆಚ್ಚ, ಸರ್ವೀಸ್ ಸೌಲಭ್ಯ, ಇಂಧನ ಕ್ಷಮತೆ ಮತ್ತು ಪರಿಸರ ಸ್ನೇಹಿ ವಾಹನಗಳಿಗೆ ಆದ್ಯತೆ ಕೊಡಲಾಗುತ್ತಿದೆ.
ಈ ಮೂಲಕ ಸರಕಾರದ ಸಂಕೇತವಾಗಿ ಬಿಂಬಿಸಿದ್ದ ಅಂಬಾಸಿಡರ್ ಒಂದೊಂದಾಗಿ ನಿಧಾನವಾಗಿ ಚರಿತ್ರೆ ಪುಟಕ್ಕೆ ಸೇರಲಿದೆ. ಈ ಪೈಕಿ ಕೆಲವು ಅಧಿಕಾರಿಗಳು ಈಗಾಗಲೇ ಮಾರುತಿ ಸುಜುಕಿ ಡಿಜೈರ್, ಎಸ್‌ಎಕ್ಸ್4 ಮತ್ತು ಟಾಟಾ ಇಂಡಿಗೊ ಮಾದರಿಗಳತ್ತ ವಾಲಿದ್ದಾರೆ.


Click it and Unblock the Notifications








