ಅಪಘಾತ ಮುಕ್ತ ಚಾಲಕರಿಗೆ ಕೆಎಸ್‌ಆರ್‌ಟಿಸಿ ಬೆಳ್ಳಿ ಪದಕ
ದೇಶದ ನಂ.1 ಸಾರಿಗೆ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕಎಸ್‌ಆರ್‌ಟಿಸಿ) ತಮ್ಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಪಘಾತ ಮುಕ್ತ ಚಾಲಕರಿಗೆ ಸನ್ಮಾನಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಯಾವುದೇ ಅಪಘಾತಗಳನ್ನು ಘಟಿಸಿದ ಸುಮಾರು 21ರಷ್ಟು ಚಾಲಕರಿಗೆ ಕರಾರಸಾನಿ ಬೆಳ್ಳಿ ಪದಕ ನೀಡಿ ಗೌರವಿಸಿದೆ.
ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಬೆಳ್ಳಿ ಪದಕ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪದಕ ಪುರಸ್ಕೃತ ಚಾಲಕ ಪಿ ಶ್ರೀನಿವಾಸ್ ಮಾತನಾಡುತ್ತಾ, "ಕಳೆದ 11 ವರ್ಷಗಳಿಂದ ಸಂಸ್ಥೆಗಾಗಿ ದುಡಿಯುತ್ತಿದ್ದೇನೆ. ನಮ್ಮ ಪ್ರಯತ್ನವನ್ನು ಈ ರೀತಿಯಾಗಿ ಗುರುತಿಸಿಕೊಂಡಿರುವುದು ಸಂತಸಕ್ಕೆ ಕಾರಣವಾಗಿದೆ" ಎಂದಿದ್ದಾರೆ.

ಈ ಎಲ್ಲ ಚಾಲಕರು ವರ್ಷದ 240 ದಿವಸವೂ ದುಡಿಯಬೇಕಾಗುತ್ತದೆ. ಹಾಗಿರುವಾಗ ಅಪಘಾತಗಳನ್ನು ತಪ್ಪಿಸುವುದು ದೊಡ್ಡ ಸವಾಲೇ ಸರಿ. ಈ ನಡುವೆ ಈ ಎಲ್ಲ ಸವಾಲುಗಳನ್ನು ನಿಭಾಯಿಸುವಲ್ಲಿ ಚಾಲಕರು ಯಶ ಕಂಡಿದ್ದಾರೆ. ಇದಕ್ಕೆ ಸಂಸ್ಥೆ ಸ್ಫೂರ್ತಿ ತುಂಬುತ್ತಿರುವುದು ನಿಜಕ್ಕೂ ಶ್ಲಾಘನೀಯ.
2011-2012ನೇ ಸಾಲಿನ ಅಪಘಾತ ಮುಕ್ತ ಚಾಲಕರ ಪ್ರಶಸ್ತಿಯನ್ನು ಇದೀಗ ಪ್ರದಾನ ಮಾಡಲಾಗಿದ್ದು, ಇದನ್ನು ವರ್ಷಂಪ್ರತಿ ಮುಂದುವರಿಸಿಕೊಂಡು ಹೋಗಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಈ ಎಲ್ಲ ಚಾಲಕರಿಗೆ ತಿಂಗಳಿಗೆ ಹೆಚ್ಚುವರಿ 50 ರು. ಭತ್ಯೆ ನೀಡಲಾಗುವುದು ಎಂಬುದನ್ನು ಖಚಿತಪಡಿಸಿದ್ದಾರೆ. ಹಾಗೊಂದು ವೇಳೆ ಮತ್ತೆ ಅಪಘಾತ ಘಟಿಸಿದ್ದಲ್ಲಿ ಈ ಪ್ರಯೋಜನವನ್ನು ಹಿಂಪಡೆಯಲಾಗುವುದು.

ಬ್ಲಾಂಕೆಟ್ ವಾಶಿಂಗ್ ಘಟಕ ಆರಂಭ...
ದೇಶದ ರಸ್ತೆ ಸಾರಿಗೆ ಉದ್ಯಮಗಳಲ್ಲಿ (ಆರ್‌ಟಿಯು) ಇದೇ ಮೊದಲ ಬಾರಿಯೆಂಬಂತೆ ಕರಾರಸಾನಿಯು ಇತ್ತೀಚೆಗಷ್ಟೇ ಬ್ಲಾಂಕೆಟ್ ಘಟಕವನ್ನು ಆರಂಭಿಸಿತ್ತು. ಇಲ್ಲಿ ಸಂಸ್ಥೆಯ ಬಸ್ಸುಗಳಲ್ಲಿನ ಹಾಸಿನ ಬಟ್ಟೆಗಳನ್ನು ತೊಳೆದು ಒಣಿಗಿಸಿ ಕೊಡಲಾಗುವುದು. ಇದು ಪ್ರಯಾಣಿಕರಿಗೆ ಇನ್ನಷ್ಟು ಆರಾಮದಾಯಕ ಪಯಣ ಖಾತ್ರಿಪಡಿಸಲಿದೆ.
ಸಂಸ್ಥೆಯ ಪ್ರೀಮಿಯಂ ಬಸ್ಸುಗಳಲ್ಲಿ ಈ ಸೇವೆ ಲಭ್ಯವಿರಲಿದೆ. ಬ್ಲಾಂಕೆಟ್ ವಾಶಿಂಗ್ ಘಟಕದಲ್ಲಿ ಒಟ್ಟು 24 ಸದಸ್ಯರಿರಲಿದ್ದು, ಮೂರು ಶಿಫ್ಟ್‌ಗಳಲ್ಲಾಗಿ ಕೆಲಸ ಮಾಡಲಿದ್ದಾರೆ. ಈ ಮೂಲಕ ಪ್ರತಿದಿನ 7200ರಷ್ಟು ಹಾಸಿಗೆ ಬಟ್ಟೆಗಳನ್ನು ಒಗೆಯುವ ಯೋಜನೆ ಇರಿಸಲಾಗಿದೆ. ಈ ಮೂಲಕ ತಿಂಗಳಲ್ಲಿ 3.6 ಲಕ್ಷ ರು.ಗಳನ್ನು ಉಳಿತಾಯ ಮಾಡಬಹುದಾಗಿದೆ.


Click it and Unblock the Notifications








