ಮಾರುತಿಯಿಂದ ವರ್ಷಂಪ್ರತಿ 3 ದಶಲಕ್ಷ ಕಾರುಗಳ ಮಾರಾಟ ಗುರಿ
ದೇಶದ ನಂ.1 ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ವರ್ಷಂಪ್ರತಿ 3 ದಶಲಕ್ಷ ಯುನಿಟ್‌ಗಳ ಮಾರಾಟ ಗುರಿ ಇರಿಸಿಕೊಂಡಿದೆ. ಈ ಮೂಲಕ ಕಳೆದ ಮೂರು ದಶಕಗಳಷ್ಟು ಕಾಲ ದೇಶದ ರಸ್ತೆಯನ್ನು ಆಳಿರುವ ಮಾರುತಿ ಭವಿಷ್ಯದತ್ತ ಸ್ಪಷ್ಟ ಯೋಜನೆಯನ್ನು ಇರಿಸಿಕೊಂಡಿದೆ.
ಮುಂದಿನ 30 ವರ್ಷಗಳ ಯೋಜನೆ ಕೇಂದ್ರಿಕರಿಸಿರುವ ಮಾರುತಿ ಈ ಎರಡನೇ ಹಂತವನ್ನು 'ಮಾರುತಿ 2.0' ಎಂದು ಹೆಸರಿಸಿಕೊಂಡಿದೆ. ಇವೆಲ್ಲವೂ ಹೆಚ್ಚು ಇಂಧನ ಕ್ಷಮತೆಯ ಪರಿಸರ ಸ್ನೇಹಿ ವಿನ್ಯಾಸಿತ ವಾಹನಗಳಿಂದ ಮಾತ್ರ ಸಾಧ್ಯ ಎಂಬುದನ್ನು ಸಂಸ್ಥೆಯು ಮನಗಂಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಡೀಸೆಲ್, ಸಿಎನ್‌ಜಿ ಮತ್ತು ಎಲ್‌ಪಿಜಿ ಜೊತೆಗೆ ಹೆಚ್ಚು ಇಂಧನ ಆಯ್ಕೆಗಳನ್ನು ಹೊರತರುವ ಯೋಜನೆಯನ್ನು ಹೊಂದಿದೆ.

ನಿಮಗೆ ತಿಳಿದಿರುವಂತೆಯೇ ನಿಕಟ ಭವಿಷ್ಯದಲ್ಲೇ ಮಾರುತಿ 800 ಸಿಸಿ ಡೀಸೆಲ್ ಎಂಜಿನ್ ಕಾರನ್ನು ಬಿಡುಗಡೆ ಮಾಡುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾರುತಿ ಸುಜುಕಿ ಮುಖ್ಯಸ್ಥ ಆರ್‌ಸಿ ಭಾರ್ಗವ, ಗುಜರಾತ್ ಘಟಕದಲ್ಲಿ ಅಂಗಸಂಸ್ಥೆ ಸುಜುಕಿ ಮೋಟಾರು ಕಾರ್ಪ್ ಹೂಡಿಕಾ ಯೋಜನೆಯು ಉತ್ತಮ ನೀತಿಯಾಗಿರಲಿದೆ ಎಂದಿದ್ದಾರೆ.
ನಿಮ್ಮ ಮಾಹಿತಿಗಾಗಿ, 20113-14 ಆರ್ಥಿಕ ಸಾಲಿನಲ್ಲಿ ಮಾರುತಿ ಸುಜುಕಿ ಇಂಡಿಯಾ ಸಂಸ್ಥೆಯು ಒಟ್ಟು 11,55,041 ಯುನಿಟ್‌ಗಳ ಮಾರಾಟವನ್ನು ಸಾಧಿಸಿತ್ತು. ಹಾಗಾಗಿ 3 ದಶಲಕ್ಷಗಳ ಮಾರಾಟ ಗುರಿಯನ್ನು ಯಾವಾಗ ತಲುಪಲಿದೆ ಎಂಬುದನ್ನು ಹೇಳುವುದು ಕಷ್ಟಕರ.
ಏತನ್ಮಧ್ಯೆ ಸಂಸ್ಥೆಯು ಕಳೆದ ಜನವರಿ ತಿಂಗಳಿನಲ್ಲಷ್ಟೇ ಮಾರುತಿ 800 ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಮಾರುತಿ ಪಾಲಿಗೆ ಅತಿ ಹೆಚ್ಚು ಯಶಸ್ಸನ್ನು ತಂದು ಕೊಟ್ಟಿರುವ ಮಾರುತಿ 800 ಕಳೆದ ಮೂರು ದಶಕಗಳಿಂದ (1983ನೇ ಇಸವಿಯಿಂದ) 2.7 ದಶಲಕ್ಷ ಯುನಿಟ್‌ಗಳ ಮಾರಾಟ ಸಂಖ್ಯೆಯನ್ನು ತಲುಪಿತ್ತು.
ಇವೆಲ್ಲದರ ಜೊತೆಗೆ ಮಾರುತಿ ಸಂಸ್ಥೆಯು ಹರಿಯಾಣದಲ್ಲಿ ಹೊಸತಾದ ಅಧ್ಯಯನ ಹಾಗೂ ಅಭಿವೃದ್ಧಿ ಕೇಂದ್ರದ ಸ್ಥಾಪನೆಗಾಗಿ 2000 ಕೋಟಿ ರು. ಹೂಡಿಕೆ ಮಾಡುವ ಯೋಜನೆ ಹೊಂದಿದೆ. ಇದು ಜಪಾನ್ ಹೊರಗಡೆಯಿರುವ ಮಾರುತಿಯ ಅತಿ ದೊಡ್ಡ ಆರ್ ಆಂಡ್ ಡಿ ಸೆಂಟರ್ ಎನಿಸಿಕೊಳ್ಳಲಿದೆ.
ಅಷ್ಟೇ ಅಲ್ಲದೆ ನಿಕಟ ಭವಿಷ್ಯದಲ್ಲೇ ಕ್ರೀಡಾ ಬಳಕೆಯ ವಾಹನಗಳ (ಎಸ್‌ಯುವಿ) ವಿಭಾಗಕ್ಕೂ ಮಾರುತಿ ಎಂಟ್ರಿ ಕೊಡಲಿದೆ. ಈ ಮೂಲಕ ಸಣ್ಣ ಕಾರುಗಳ ವಿಭಾಗದಿಂದ ಇನ್ನಷ್ಟು ಪ್ರೀಮಿಯಂ ಕಾರುಗಳ ವಿಭಾಗದಲ್ಲಿ ತನ್ನ ಗಮನ ಕೇಂದ್ರಿಕರಿಸಲಿದೆ.


Click it and Unblock the Notifications