ಭವಿಷ್ಯದಲ್ಲಿ ಬರಲಿದೆ ಸ್ಟೀರಿಂಗ್ ವೀಲ್ ಇಲ್ಲದ ಕಾರುಗಳು!
ಚಾಲಕ ರಹಿತ ಕಾರುಗಳನ್ನು ನೀವೀಗಲೇ ಕೇಳಿರುವಿರಿ. ಅಂದ ಹಾಗೆ ಸ್ಟೀರಿಂಗ್ ಇಲ್ಲದ ಕಾರುಗಳನ್ನು ನಿಮ್ಮಿಂದ ಯೋಚನೆ ಮಾಡಲು ಸಾಧ್ಯವೇ? ಹೌದು, ವಾಹನ ಜಗತ್ತಿನ ಎಂಜಿನಿಯರ್‌ಗಳು ಇಂತಹದೊಂದು ಸಾಧ್ಯತೆಯನ್ನು ಮನಗಂಡು ವರ್ಷಗಳೇ ಸಂದಿವೆ. ಆದರೆ ಇದಕ್ಕೀಗ ಮರುಜೀವ ತುಂಬಿಕೊಂಡಿದೆ.
ಚಾಲಕರೇ ಇಲ್ಲದೇ ಬರಿ ಸೆನ್ಸಾರ್ ಮೂಲಕ ಕಾರುಗಳು ಚಲಿಸಬೇಕಾದರೆ ಇನ್ನು ಸ್ಟೀರಿಂಗ್ ವೀಲ್‌ಗೆ ಕೆಲಸ ಎಲ್ಲಿಂದ ಬಂತು ಹೇಳಿ ನೋಡೋಣ? ಹೌದು, ಇತ್ತೀಚೆಗಷ್ಟೇ ಇನ್ಸಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ ಎಂಜಿನಿಯರ್ಸ್ (ಐಇಇಇ) ನಡೆಸಿರುವ ಅಧ್ಯಯನದಲ್ಲಿ ಭವಿಷ್ಯದ ಕಾರುಗಳು ಸ್ಟೀರಿಂಗ್ ವೀಲ್ ಸೇರಿದಂತೆ ಇನ್ನಿತರ ಪ್ರಮುಖ ಘಟಕಗಳು ಇಲ್ಲದೆಯೇ ಚಲಿಸಲಿದೆ ಎಂದಿದೆ.

ಇಲ್ಲಿ ನಷ್ಟ ಎಂದರೆ ಹಿನ್ನಡೆಯಲ್ಲ. ಬದಲಾಗಿ ಕಾರು ತಂತ್ರಗಾರಿಕೆ ಶಿಪ್ರ ಗತಿಯ ಪ್ರಗತಿ ಸಾಧಿಸಲಿದ್ದು, ಸ್ಟೀರಿಂಗ್ ವೀಲ್, ಬ್ರೇಕ್ ಪೆಡಲ್, ರಿಯರ್ ವ್ಯೂ ಅಷ್ಟೇ ಯಾಕೆ ಹಾರ್ನ್‌ಗಳ ಅಗತ್ಯವಿಲ್ಲದೆ ಚಲಿಸುವ ಸಾಮರ್ಥ್ಯ ಪಡೆಯಲಿದೆ ಎಂದಿದೆ.
ಇವೆಲ್ಲ ನನಸಾಗಲು ತುಂಬಾ ವರ್ಷದ ತನಕ ಕಾಯಬೇಕಾಗಿಲ್ಲ. ಮುಂದಿನ 20 ವರ್ಷಗಳಲ್ಲಿ ಅಂದರೆ 2035ರ ವೇಳೆಯಾಗುವಾಗ ಈ ಕನಸು ನನಸಾಗಲಿದೆ. ಪ್ರಸ್ತುತ ಅಧ್ಯಯನದಲ್ಲಿ 200ಕ್ಕೂ ಹೆಚ್ಚು ಸಂಶೋಧಕರು, ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಕೆಲವು ಸರ್ಕಾರಿ ಸಂಸ್ಥೆಗಳು ಭಾಗವಹಿಸಿದ್ದರು.
ಅನೇಕ ವಾಹನ ತಯಾರಕ ಸಂಸ್ಥೆಗಳು ಈಗಾಗಲೇ ಸ್ವಯಂಚಾಲಿತ ಕಾರುಗಳ ಅಭಿವೃದ್ಧಿಯಲ್ಲಿ ತೊಡಗಿದ್ದು, ಈ ನಿಟ್ಟಿನಲ್ಲಿ ಒಂದು ಹಂತದ ವರೆಗೆ ಯಶಸ್ಸನ್ನು ಸಹ ಕಂಡಿರುವುದು ಗಮನಾರ್ಹವೆನಿಸುತ್ತಿದೆ.


Click it and Unblock the Notifications








