ವರ್ಷಾಂತ್ಯದಲ್ಲಿ ಫೋಕ್ಸ್‌ವ್ಯಾಗನ್ ಕಾಂಪಾಕ್ಟ್ ಎಸ್‌ಯುವಿ ಎಂಟ್ರಿ
ಫೋರ್ಡ್ ಇಕೊಸ್ಪೋರ್ಟ್, ರೆನೊ ಡಸ್ಟರ್, ನಿಸ್ಸಾನ್ ಟೆರನೊ ಹಾಗೂ ಟೊಯೊಟಾ ಕ್ರಾಸೋವರ್ ರೂಪದಲ್ಲಿ ಕಾಂಪಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಭಾರಿ ಪೈಪೋಟಿ ನಡೆಯುತ್ತಿದೆ. ಇದಕ್ಕೊಂದು ಹೊಸತೊಂದು ಸೇರ್ಪಡೆಯೆಂಬಂತೆ ಫೋಕ್ಸ್‌ವ್ಯಾಗನ್ ಕಾಂಪಾಕ್ಟ್ ಎಸ್‌ಯುವಿ ಪ್ರಸಕ್ತ ಸಾಲಿನಲ್ಲೇ ಲಾಂಚ್ ಆಗಲಿದೆ.
ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಗೆ ಅನುಗುಣವಾಗಿ ಟೈಗನ್ ಕಾಂಪಾಕ್ಟ್ ಎಸ್‌ಯುವಿ ಬಿಡುಗಡೆ ಮಾಡಲು ಫೋಕ್ಸ್‌ವ್ಯಾಗನ್ ಯೋಜನೆ ಹೊಂದಿದೆ. ಎರಡು ವರ್ಷಗಳ ಹಿಂದೆ 2012ರಲ್ಲಿ ಬ್ರೆಜಿಲ್‌ನ ಸಾವೋ ಪಾಲೋದಲ್ಲಿ ಫೋಕ್ಸ್‌ವ್ಯಾಗನ್ ಟೈಗನ್ ಕಾಂಪಾಕ್ಟ್ ಎಸ್‌ಯುವಿ ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು.

ಬಳಿಕ ಪ್ರಸಕ್ತ ಸಾಲಿನ ವರ್ಷಾರಂಭದಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲೂ ನಿರ್ಮಾಣ ಸಿದ್ಧ ವರ್ಷನ್ ಪರಿಚಯಿಸಲಾಗಿತ್ತು. ಜರ್ಮನಿಯ ಐಕಾನಿಕ್ ಸಂಸ್ಥೆಯು ಇದರಲ್ಲಿ 1.0 ಲೀಟರ್ 3 ಸಿಲಿಂಡರ್ ಟಿಎಸ್‌ಐ ಪೆಟ್ರೋಲ್ ನಿಯಂತ್ರಣ ಎಂಜಿನ್ ಆಳವಡಿಸಲಿದೆ. ಇದು ಗರಿಷ್ಠ 110 ಪಿಎಸ್ ಪವರ್ (175 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.
ಸಂಸ್ಥೆಯ ಪ್ರಕಾರ ಫೋಕ್ಸ್‌ವ್ಯಾಗನ್ ಟೈಗನ್ ಪ್ರತಿ ಲೀಟರ್‌ಗೆ 21 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಈ ವಿಭಾಗದಲ್ಲಿ ಇದು ಗರಿಷ್ಠ ಇಂಧನ ಕ್ಷಮತೆಯಾಗಿದ್ದರೂ ನೈಜ ರಸ್ತೆ ಪರಿಸ್ಥಿತಿಯಲ್ಲಿ ಎಷ್ಟು ಮೈಲೇಜ್ ನೀಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

985 ಕೆ.ಜಿ ಭಾರ ಹೊಂದಿರುವ ಫೋಕ್ಸ್‌ವ್ಯಾಗನ್ ಟೈಗನ್ ನಾಲ್ಕು ಮೀಟರ್ ಪರಿಧಿಯನ್ನು (3.86 ಮೀಟರ್) ಮೀರುವುದಿಲ್ಲ. ಆದರೆ ನಿರ್ಮಾಣ ಸಿದ್ಧ ವಾಹನ ಇದಕ್ಕಿಂತಲೂ ಸ್ವಲ್ಪ ಹೆಚ್ಚು ಉದ್ದ ಹಾಗೂ ಭಾರವನ್ನು ಹೊಂದುವ ಸಾಧ್ಯತೆಯಿದೆ.
ಇದೇ ಸಂದರ್ಭದಲ್ಲಿ ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ಫೋಕ್ಸ್‌ವ್ಯಾಗನ್ ಆಗಮನವಾಗುವ ನಿರೀಕ್ಷೆಯಿದೆ. ಇದು 1.4 ಲೀಟರ್ 3 ಸಿಲಿಂಡರ್ ಟರ್ಬೊಚಾರ್ಜ್ಡ್ ಡೈರಕ್ಟ್ ಇಂಜೆಕ್ಷನ್ ಸಿಸ್ಟಂ ಪಡೆಯಲಿದೆ. ಇದು ಗಂಟೆಗೆ 185 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.
ಅದೇ ಹೊತ್ತಿಗೆ ಕಾರಿನ ಒಳಾಗಂಣವು ಪ್ರೀಮಿಯಂ ಜೊತೆಗೆ ಐಷಾರಾಮಿ ಸೌಲಭ್ಯಗಳನ್ನು ಹೊಂದಿರಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲವಾದರೂ ಬಿಡುಗಡೆ ವೇಳೆಗೆ ಸಂಪೂರ್ಣ ಚಿತ್ರಣ ಲಭಿಸಲಿದೆ.


Click it and Unblock the Notifications








