ಟಕಟ ಏರ್ ಬ್ಯಾಗ್ ದೋಷ; ಫೆರಾರಿಯಿಂದಲೂ ಹಿಂದಕ್ಕೆ ಕರೆ
ಏರ್ ಬ್ಯಾಗ್ ಗಳನ್ನು ಪೂರೈಸುವ ಸಂಸ್ಥೆ ಟಕಟ ಕಳೆದ ಕೆಲವು ತಿಂಗಳುಗಳಿಂದ ಒಳ್ಳೆಯದಕ್ಕಿಂತಲೂ ಹೆಚ್ಚಾಗಿ ಕೆಟ್ಟ ಸುದ್ದಿಗಳಿಗಾಗಿ ಸುದ್ದಿ ಮಾಡುತ್ತಿದೆ. ಇದೀಗ ಬಂದಿರುವ ಮಾಹಿತಿಯ ಪ್ರಕಾರ ಟಕಟ ಒದಗಿಸುತ್ತಿರುವ ಫೆರಾರಿ ಸೂಪರ್ ಕಾರಿನ ಏರ್ ಬ್ಯಾಗ್ ಗಳಲ್ಲೂ ಸಮಸ್ಯೆ ಕಂಡುಬಂದಿದೆ.
ಜಗತ್ತಿನ ಪ್ರಮುಖ ಸಂಸ್ಥೆಗಳಿಗೆ ಟಕಟ ಏರ್ ಬ್ಯಾಗ್ ಪೂರೈಕೆಯಾಗುತ್ತಿದೆ. ಆದರೆ ಗಾಳಿಚೀಲದಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಬಹುತೇಕ ಸಂಸ್ಥೆಗಳು ಭಾರಿ ರಿಕಾಲ್ ಗೆ ಕರೆ ನೀಡಿವೆ. ಈ ಪಟ್ಟಿಗೀಗ ಇಟಲಿಯ ಸೂಪರ್ ಕಾರು ತಯಾರಿಕ ಸಂಸ್ಥೆಯಾಗಿರುವ ಫೆರಾರಿ ಕೂಡಾ ಸೇರಿದೆ.

ವರದಿಗಳ ಪ್ರಕಾರ, ಜಾಗತಿಕವಾಗಿ 2600 ಫೆರಾರಿ ಕಾರುಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ. 2014 ಡಿಸೆಂಬರ್ 19ರಿಂದ 2015 ಎಪ್ರಿಲ್ 29ರ ವರೆಗೆ ನಿರ್ಮಾಣವಾದ ವಾಹನ ಇದಾಗಿದೆ. ಈ ಎಲ್ಲ ಬೆಳವಣಿಗೆಗಳು ಟಕಟಗೆ ಭಾರಿ ಹಿನ್ನೆಡೆಗೆ ಕಾರಣವಾಗಿದೆ.
ಫೆರಾರಿಯ ಜನಪ್ರಿಯ ಮಾದರಿಗಳಾದ 458 ಇಟಲಿಯಾ, 458 ಸ್ಪೈಡರ್, 458 ಸ್ಪೆಷಲ್ ಎ, ಕ್ಯಾಲಿಫೋರ್ನಿಯಾ ಟಿ, ಎಫ್12 ಬರ್ಲಿನೆಟ್ಟಾ ಮತ್ತು ಹೊಚ್ಚ ಹೊಸ ಲಾಫೆರಾರಿ ಮಾದರಿಗಳಲ್ಲೂ ತೊಂದರೆ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಫೆರಾರಿ ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ಚಾಲಕ ಬದಿಯ ಏರ್ ಬ್ಯಾಗ್ ಗಳಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಸಂಪೂರ್ಣ ಉಚಿತವಾಗಿ ಸಮಸ್ಯೆ ಸರಿಪಡಿಸಿಕೊಡಲಾಗುವುದು.


Click it and Unblock the Notifications








